ಉದ್ಯಮಿ ಅಪಹರಣ: 28 ಲಕ್ಷ ರು. ದೋಚಿ ಪರಾರಿ

KannadaprabhaNewsNetwork |  
Published : Jan 31, 2025, 12:48 AM IST
ಪೋಟೋ 6 : ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ | Kannada Prabha

ಸಾರಾಂಶ

ಅಪಹರಣ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ಉದ್ಯಮವನ್ನು ನಾಶಮಾಡುವುದಲ್ಲದೇ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಘಟನಾ ಸಂಬಂಧ ಇಕ್ಬಾಲ್ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಉದ್ಯಮಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಚಿತ್ರಹಿಂಸೆ ನೀಡಿ, 28 ಲಕ್ಷ ರು. ದೋಚಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲ್ಬೆ ಗ್ರಾಮದ ನಿವಾಸಿ ಇಕ್ಬಾಲ್, ಅಪಹರಣಕ್ಕೆ ಒಳಗಾದವರಾಗಿದ್ದು, ಬಂಕ್ ಹಾಗೂ ಟ್ರಾನ್ಸ್ ಪೋರ್ಟ್ ಉದ್ಯಮಿಯಾಗಿದ್ದಾರೆ.

ಘಟನಾ ಹಿನ್ನೆಲೆ:ಜ.24ರಂದು ಉದ್ಯಮಿ ಇಕ್ಬಾಲ್ ದೇವನಹಳ್ಳಿಯ ಖಾಸಗಿ ಹೋಟೆಲ್ ಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಕರೀಂ ಮನೆಯಲ್ಲಿ ಉಳಿದುಕೊಂಡು ಮರುದಿನ ಜ.25ರಂದು ಶನಿವಾರ ಬೆಳಗ್ಗೆ ಕರೀಮ್‍ನಿಂದ ಒಂದುವರೆ ಲಕ್ಷ ರುಪಾಯಿ ಪಡೆದುಕೊಂಡು, ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಸಿಮ್ ಬಿರಿಯಾನಿ ಹೋಟೆಲ್‍ನಲ್ಲಿ ಊಟ ಮುಗಿಸಿ, ನೆಲಮಂಗಲದಿಂದ ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದರು.

ಮಾರಕಾಸ್ತ್ರಗಳಿಂದ ಬೆದರಿಸಿ ಕಿಡ್ಯ್ನಾಪ್ :

ಈ ಸಮಯದಲ್ಲಿ ಮಾರ್ಗ ಮಧ್ಯ ಹೆದ್ದಾರಿಯಲ್ಲಿ ಮೂರು ಕಾರ್‍ಗಳಲ್ಲಿ ಬಂದ ದುಷ್ಕರ್ಮಿಗಳು ಇಕ್ಬಾಲ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅವರನ್ನು ಅಪಹರಿಸಿದ್ದಾರೆ. ಅಪಹರಿಸಿದ ನಂತರ ಅಜ್ಞಾತ ಸ್ಥಳಕ್ಕೆ ಎತ್ತೊಯ್ದು ಎರಡು ದಿನಗಳ ಕಾಲ ನೀಡಬಾರದ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ ತನ್ನ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ 15 ಲಕ್ಷ ರುಪಾಯಿ ವರ್ಗಾವಣೆ ಮಾಡಿಕೊಂಡು, ಭಾನುವಾರ ಸಕಲೇಶಪುರದಲ್ಲಿದ್ದ ಇಕ್ಬಾಲ್ ಸಹೋದರನ ರೆಸಾರ್ಟ್‍ಗೆ ತೆರಳಿ, ಅಲ್ಲಿಯೂ ತನ್ನ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿ ಆತನಿಂದಲೂ 13 ಲಕ್ಷ ರು. ಹಣ ಪಡೆದುಕೊಂಡು, ಇಕ್ಬಾಲ್‍ನನ್ನು ರೆಸಾರ್ಟ್ ಬಳಿಯೇ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.

ಕೊಲೆ ಬೆದರಿಕೆ:

ಅಪಹರಣ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ಉದ್ಯಮವನ್ನು ನಾಶಮಾಡುವುದಲ್ಲದೇ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಘಟನಾ ಸಂಬಂಧ ಇಕ್ಬಾಲ್ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ