ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರ ಹತ್ಯೆ ಖಂಡನೀಯ

KannadaprabhaNewsNetwork | Published : Apr 27, 2025 1:45 AM

ಸಾರಾಂಶ

ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ, ಮೃತರಿಗೆ ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಯಿತು.

ಹೊಸಪೇಟೆ: ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ, ಮೃತರಿಗೆ ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಾಗರಿಕರನ್ನು ಹತ್ಯೆ ಮಾಡಿದ್ದು ಖಂಡನೀಯ. ಕೇಂದ್ರ ಸರ್ಕಾರದ ಅತಿ ಶೀಘ್ರದಲ್ಲೇ ಹಂತಕ ಉಗ್ರರನ್ನು ಹಿಡಿದು ಕಠಿಣವಾದ ಶಿಕ್ಷೆ ನೀಡಬೇಕು. ದೇಶದಲ್ಲಿನ ಅಮಾಯಕ ಜನರನ್ನು ಗುರಿಯಾಗಿಸಿ ಕೊಂದದ್ದನ್ನು ನೋಡಿ ದೇಶದ ಜನರು ಭಯದ ವಾತಾವರಣದಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ದೇಶದ ಗಡಿ ಭಾಗದಲ್ಲಿ ನಾಗರಿಕರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಇನ್ನೊಂದು ಸಲ ದೇಶದ ಯಾವುದೇ ಭಾಗದಲ್ಲಿ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಮಾತನಾಡಿ, ದೇಶಾದ್ಯಂತ ಎಐಸಿಸಿಯಿಂದ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಉಗ್ರರ ದಾಳಿ ಖಂಡಿಸಿ, ಕ್ಯಾಂಡಲ್ ಮೆರವಣಿಗೆ ಹಾಗೂ ಮೃತ ನಾಗರಿಕರಿಗೆ ಸಂತಾಪ ಸೂಚನೆ ಮತ್ತು ಶ್ರದ್ಧಾಂಜಲಿ ನಮನಗಳು ಸಲ್ಲಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಹತ್ಯೆಗೀಡಾದ ಪ್ರತಿಯೊಬ್ಬರಿಗೂ ತಲಾ ಒಂದು ಕೋಟಿ ರು. ನೀಡಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿ, ಮುಖಂಡರಾದ ಕೆ. ರಮೇಶ, ಕೆ.ಎಸ್. ದಾದಾಪೀರ, ವಿನಾಯಕ ಶೆಟ್ಟರ್, ಬಿ. ಮಾರೆಣ್ಣ, ಸಣ್ಣ ಈರಪ್ಪ, ಬಿ. ನಾರಾಯಣ, ದಾದಾ ಖಲಂದರ್, ಶೇಖ್ ತಾಜುದ್ದೀನ್, ಕೆ. ಇಮ್ತಿಯಾಜ್, ಸಿ.ಆರ್. ಭರತ ಕುಮಾರ್ ಮತ್ತಿತರರಿದ್ದರು.

ಕೊಟ್ಟೂರು ಬ್ಲಾಕ್ ಕಾಂಗ್ರೆಸ್‌ನಿಂದ ಉಗ್ರರ ಕೃತ್ಯ ಖಂಡನೆ:

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಅಟ್ಟಹಾಸದಿಂದ ಮೃತಪಟ್ಟ ಅಮಾಯಕರಿಗೆ ಶುಕ್ರವಾರ ರಾತ್ರಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಟ್ಟಣದಲ್ಲಿ ಮೇಣದಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಸಿ, ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ. ದಾರುಕೇಶ್ , ಜಿಪಂ ಮಾಜಿ ಸದಸ್ಯ ಪಿ.ಎಚ್‌. ದೊಡ್ಡರಾಮಣ್ಣ, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಬದ್ದಿ ಮರಿಸ್ವಾಮಿ, ಅಡಿಕೆ ಮಂಜುನಾಥ, ಶಿರಿಬಿ ಕೊಟ್ರೇಶ್, ಶಿವಕುಮಾರ್ ಗೌಡ, ಕಂದಗಲ್ಲು ಪರಶುರಾಮ, ಮಂಜುನಾಥ ಗೌಡ, ಶ್ರೀನಿವಾಸ ಸಕ್ಕರಿ, ವಿನಯಗೌಡ ಮತ್ತು ಇತರರು ಭಾಗವಹಿಸಿ, ಉಗ್ರರು ನಡೆಸಿದ ಹೀನಕೃತ್ಯ ಖಂಡಿಸಿದರು.

Share this article