ಕೊಪ್ಪಳ: ಇಲ್ಲಿನ ಕಿಮ್ಸ್ (ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಕಾಲೇಜಿನ 450 ಆಸನಗಳ ಸಾಮರ್ಥ್ಯದ ಸುಸಜ್ಜಿತ ಆಡಿಟೋರಿಯಂನಲ್ಲಿದ್ದ ಪಿಒಪಿ ವ್ಯವಸ್ಥೆಯನ್ನು ಅನುಮತಿ ಇಲ್ಲದೆ ನಿಯಮಬಾಹಿರವಾಗಿ ತೆರವುಗೊಳಿಸಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಧಿಕಾರ ದುರ್ಬಳಕೆ ಹಾಗೂ ಸರ್ಕಾರಿ ಹಣ ಪೋಲಾಗಿರುವ ಶಂಕೆ ವ್ಯಕ್ತವಾಗಿದೆ.
ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ನೀಡಿರುವ ಅಧಿಕೃತ ಪತ್ರದ ಪ್ರಕಾರ, ಈ ಪಿಒಪಿ ತೆರವು ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಅಥವಾ ಯಾವುದೇ ಸಂಬಂಧಿತ ಉನ್ನತ ಇಲಾಖೆಯಿಂದ ಅಧಿಕೃತ ಆದೇಶವಾಗಲಿ ಅಥವಾ ಅನುಮತಿಯಾಗಲಿ ಸಿಕ್ಕಿಲ್ಲ. ಇಷ್ಟೂ ಅಲ್ಲದೆ, ಇಂತಹ ದೊಡ್ಡ ಮಟ್ಟದ ಕಾಮಗಾರಿ ಅಥವಾ ತೆರವು ಪ್ರಕ್ರಿಯೆಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಅಲ್ಲಿಂದ ತೆರವು ಮಾಡಿದ ವಸ್ತುಗಳೂ ಈಗ ಅಲ್ಲಿಲ್ಲ.
ಮುಖ್ಯ ಆಡಳಿತಾಧಿಕಾರಿ ಜೂ. 3ರಂದು ರಜೆಯಲ್ಲಿದ್ದ ಸಂದರ್ಭ ಬಳಸಿಕೊಂಡು ಈ ಆಡಳಿತಾತ್ಮಕ ಕ್ರಮ ಜರುಗಿಸಲಾಗಿದೆ. ಪಿಒಪಿಯನ್ನು ಯಾವ ದಿನಾಂಕದಂದು ಮತ್ತು ಯಾರ ಆದೇಶದ ಮೇರೆಗೆ ಕಿತ್ತುಹಾಕಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಡತಗಳನ್ನು ಮುಖ್ಯ ಆಡಳಿತಾಧಿಕಾರಿ ಗಮನಕ್ಕೆ ತರದೆ ಈ ಕೆಲಸ ಮಾಡಿರುವುದು ನೇರವಾದ ಅಧಿಕಾರ ದುರ್ಬಳಕೆ ಎತ್ತಿ ತೋರಿಸುತ್ತದೆ. ಕೆಲವೇ ಕೆಲವು ಸಾವಿರ ರುಪಾಯಿಗಳಲ್ಲಿ ದುರಸ್ತಿಗೊಳಿಸಬಹುದಾದ ಕೆಲಸಕ್ಕೆ ಅಪಾರ ಹಣ ಪೋಲು ಮಾಡಲಾಗಿದೆ.ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಸುಸ್ಥಿತಿಯಲ್ಲಿದ್ದ ಆಡಿಟೋರಿಯಂ ಪಿಒಪಿಯನ್ನು ಕಾನೂನುಬಾಹಿರವಾಗಿ ಧ್ವಂಸ ಮಾಡಿರುವುದರಿಂದ ಸರ್ಕಾರಕ್ಕೆ ಸುಮಾರು ₹೩೦ರಿಂದ ₹೩೫ ಲಕ್ಷ ನಷ್ಟ ಉಂಟಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಅವ್ಯವಹಾರದ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ಈಗಾಗಲೇ ಪತ್ರದ ಪ್ರತಿಗಳನ್ನು ರವಾನಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬಂದಿದೆ.