ಕಿಮ್ಸ್‌: ರೋಗಿಗಳ ಸಂಖ್ಯೆಶೇ. 13ರಷ್ಟು ಹೆಚ್ಚಳ

KannadaprabhaNewsNetwork | Published : Jul 2, 2024 1:30 AM

ಸಾರಾಂಶ

ಕಿಮ್ಸ್‌ನ ಈಗಿರುವ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಪಕ್ಕದಲ್ಲಿಯೇ ಮತ್ತೊಂದು 60 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ (ಸಿಸಿಬಿ) ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿದೇ ಕಾಮಗಾರಿ ಪ್ರಾರಂಭವಾಗಲಿದೆ.

ಹುಬ್ಬಳ್ಳಿ:

ಕಳೆದ ಎರಡು ವರ್ಷಗಳಲ್ಲಿ ಕಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ. 13ರಷ್ಟು ಹೆಚ್ಚಳವಾಗಿದ್ದು, ಗುಣಮಟ್ಟದ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ವರ್ಷಗಳಲ್ಲಿ ಕಿಮ್ಸ್‌ಗೆ ಬರುವ ಹೊರರೋಗಿಗಳ ಶೇ. 4ರಷ್ಟು, ಒಳರೋಗಿಗಳ ಶೇ. 9ರಷ್ಟು ಹೆಚ್ಚಳವಾಗಿದೆ. 2022-23ರಲ್ಲಿ 5,70,315 (ಪ್ರತಿನಿತ್ಯ 1563) ಹಾಗೂ 2023-24ರಲ್ಲಿ 5,93,367 (ಪ್ರತಿನಿತ್ಯ 1626) ಹೊರರೊಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 2023-24ರಲ್ಲಿ 67304 (ಪ್ರತಿನಿತ್ಯ 184) ಹಾಗೂ 2023-24ರಲ್ಲಿ 74535 (ಪ್ರತಿನಿತ್ಯ 201) ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದರು.

ಏ. 12ರಿಂದ ಕಿಮ್ಸ್‌ನಲ್ಲಿ "ಜೀವಾಮೃತ " ತಾಯಿ ಹಾಲು ಭಂಡಾರ ಕೇಂದ್ರ ತೆರೆದಿದ್ದು 312 ತಾಯಂದಿರು ಹಾಲು ದಾನ ಮಾಡಿದ್ದಾರೆ. ಇದರಲ್ಲಿ 32,750 ಎಂಎಲ್‌ ಹಾಲನ್ನು ಅರ್ಹ ಮಗುವಿಗೆ ನೀಡಿದ್ದು 26,970 ಎಂಎಲ್‌ ಹಾಲು ಪಾಶ್ಚರೀಕರಣ (ಪ್ಯಾಕ್ ಮಾಡಲಾದ ಮತ್ತು ಪ್ಯಾಕ್ ಮಾಡದ) ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2022-23ರಲ್ಲಿ 17,325 ಹಾಗೂ 2023-24ರಲ್ಲಿ 20093 ಪ್ರಮುಖ ಶಸ್ತ್ರಚಿಕಿತ್ಸೆ, 2022-23ರಲ್ಲಿ 48,476 ಹಾಗೂ 2023-24ರಲ್ಲಿ 58,713 ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಗದು ರಹಿತ ಚಿಕಿತ್ಸೆಗೆ ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ, ಹೆಸ್ಕಾಂ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ‌. ಬಂಕಾಪುರದಿಂದ ತೇಗೂರ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ 48 ಗಂಟೆಯೊಳಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ‌‌ ಎಂದು ಕಮ್ಮಾರ ಹೇಳಿದರು.

ಟೆಲಿ ಐಸಿಯು ಹಬ್‌‌ಗೆ ಉತ್ತಮ ಪತ್ರಿಕ್ರಿಯೆ ದೊರೆತಿದ್ದು, ಟೆಲಿ ಐಸಿಯುನಲ್ಲಿ 3,952 ರೋಗಿಗಳನ್ನು ಸಮಾಲೋಚಿಸಲಾಗಿದೆ. ಶೀಘ್ರವೇ ಹೊಸದಾಗಿ ನವಜಾತ ಶಿಶು ವಿಭಾಗ (ನಿಯೋ ನ್ಯಾಟೋಲಜಿ) ತೆರೆಯಲಾಗುವುದು. ವಿದ್ಯಾರ್ಥಿಗಳ ವಸತಿ ನಿಲಯಗಳ ನವೀಕರಣ, ಕ್ರೀಡಾಂಗಣ ಅಭಿವೃದ್ಧಿ, 8 ಒಟಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅಗ್ನಿ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಶೀಘ್ರವೇ ಸಿಸಿಬಿ ಆರಂಭ:

ಕಿಮ್ಸ್‌ನ ಈಗಿರುವ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಪಕ್ಕದಲ್ಲಿಯೇ ಮತ್ತೊಂದು 60 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ (ಸಿಸಿಬಿ) ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿದೇ ಕಾಮಗಾರಿ ಪ್ರಾರಂಭವಾಗಲಿದೆ. ಅಲ್ಲದೇ ವಿವಿಧ ಕಾಮಗಾರಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

ಐವಿಎಫ್‌ ಕೇಂದ್ರ ಆರಂಭ:

ಕಿಮ್ಸ್‌ನಲ್ಲಿ ಕೆಲವೇ ತಿಂಗಳಲ್ಲಿ ಐವಿಎಫ್‌ (ಕೃತಕ ಗರ್ಭಧಾರಣಾ ಕೇಂದ್ರ) ಆರಂಭಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸ್ಥಾಪನೆಗೆ ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಎರಡ್ಮೂರು ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಐವಿಎಫ್‌ ಕೇಂದ್ರ ಪ್ರಾರಂಭವಾದಲ್ಲಿ ದೇಶದ ಮೊದಲ ಐವಿಎಫ್‌ ಕೇಂದ್ರ ಹೊಂದಿದ ಎಂಬ ಹೆಗ್ಗಳಿಕೆಗೆ ಕಿಮ್ಸ್‌ ಪಾತ್ರವಾಗಲಿದೆ ಎಂದರು.

ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಮಾತನಾಡಿ, ಜೀವ ಸಾಧಕ‌ ಸಂಘದಲ್ಲಿ ಮೊದಲೇ ಅಂಗಾಂಗ ದಾನಗಳನ್ನು ಯಾವ ಆಸ್ಪತ್ರೆಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿರುವುದಿಲ್ಲ. ಕಿಮ್ಸ್‌‌‌ನಲ್ಲಿ ಕಣ್ಣು ಮತ್ತು ಕಿಡ್ನಿ ಕಸಿ ಮಾಡಲು ಅವಕಾಶವಿದೆ. ಇಲ್ಲಿಯೇ ಯಕೃತ್ತು ಕಸಿ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಡಾ. ರಾಜಶೇಖರ ದ್ಯಾಬೇರಿ, ಡಾ. ಸಿದ್ದೇಶ್ವರ ಕಡಕೋಳ, ಡಾ. ರಾಜಶಂಕರ, ಡಾ. ಶಿವಾನಂದ, ಡಾ. ಲಕ್ಷ್ಮೀಕಾಂತ್, ಡಾ. ಗಿರಿಯಪ್ಪಗೌಡ ಸೇರಿದಂತೆ ಇತರ ವಿಭಾಗಗಳ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿ ಹಾಜರಿದ್ದರು.

Share this article