ನಗರದ ಕಿನ್ನಾಳ ರಸ್ತೆಯಲ್ಲಿ ಹೊಂಡ-ಗುಂಡಿಗಳಿಂದ ಸಂಚಾರ ದುಸ್ತರವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸರ್ಕಸ್ ಮಾಡಿದಂತಾಗಿದೆ.
25 ಮೀಟರ್ ಅಗಲೀಕರಣಕ್ಕೆ ಸಿದ್ಧತೆ
₹4.5 ಕೋಟಿ ಕಾಮಗಾರಿಯಲ್ಲಿ ಕೇವಲ 600 ಮೀಟರ್ ರಸ್ತೆ ನಿರ್ಮಾಣ
ಪೂರ್ಣ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ₹2.5 ಕೋಟಿ ಬೇಡಿಕೆ
ಅರ್ಧ ರಸ್ತೆ ಕಾಮಗಾರಿಗೆ ಸ್ಥಳೀಯರ ಆಕ್ರೋಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಕಿನ್ನಾಳ ರಸ್ತೆಯಲ್ಲಿ ಹೊಂಡ-ಗುಂಡಿಗಳಿಂದ ಸಂಚಾರ ದುಸ್ತರವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸರ್ಕಸ್ ಮಾಡಿದಂತಾಗಿದೆ. ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಮೊದಲು ರಸ್ತೆ ಅಗಲೀಕರಣ ಮಾಡಿ ಒತ್ತುವರಿ ತೆರವುಗೊಳಿಸಿದ ಬಳಿಕವೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಸುಮಾರು ಒಂದು ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂಪಿಸಿರುವ ಯೋಜನೆಯಲ್ಲಿ ಕೇವಲ 600 ಮೀಟರ್ ರಸ್ತೆಯನ್ನು ಮಾತ್ರ ನಿರ್ಮಿಸಲು ಉದ್ದೇಶಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
25 ಮೀಟರ್ ಅಗಲೀಕರಣ:
ಕಿನ್ನಾಳ ರಸ್ತೆಯನ್ನು 25 ಮೀಟರ್ ಅಗಲಕ್ಕೆ ವಿಸ್ತರಿಸಲು ಸಿದ್ಧತೆ ನಡೆಸಲಾಗಿದೆ. ರಸ್ತೆ ಮಧ್ಯಭಾಗದಿಂದ ಎರಡೂ ಬದಿಗಳಲ್ಲಿ ತಲಾ 41 ಅಡಿ ವಿಸ್ತಾರಕ್ಕೆ ಜಾಗ ಗುರುತಿಸಲಾಗಿದ್ದು, ಕೆಲವೆಡೆ ಒತ್ತುವರಿ ತೆರವುಗೊಳಿಸುವ ಕುರಿತು ಮುನ್ಸೂಚನೆ ನೀಡಲಾಗಿದೆ. ಆದರೆ, ಇಷ್ಟು ವರ್ಷಗಳ ಬಳಿಕ ಈಗ ಒತ್ತುವರಿ ತೆರವು ಮಾಡುವ ಅಗತ್ಯವೇನಿದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಗಲೀಕರಣದ ಬಳಿಕ ರಸ್ತೆ ಎರಡೂ ಬದಿಗಳಲ್ಲಿ ನಿಯಮಾನುಸಾರ ತಲಾ 6 ಅಡಿ ಅಗಲದ ಚರಂಡಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರಸ್ತೆ ನಿರ್ಮಾಣ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಕೇವಲ 600 ಮೀಟರ್ ರಸ್ತೆ:
ಪ್ರಸ್ತುತ ಟೆಂಡರ್ ಪ್ರಕಾರ ಸುಮಾರು ₹4.5 ಕೋಟಿ ವೆಚ್ಚದಲ್ಲಿ ಎರಡೂ ಬದಿಗಳ ಚರಂಡಿ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುತ್ತಿದೆ. ಚರಂಡಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದರೂ, ರಸ್ತೆ ನಿರ್ಮಾಣವನ್ನು ಕೇವಲ 600 ಮೀಟರ್ಗೆ ಸೀಮಿತಗೊಳಿಸಲಾಗಿದೆ. ಇದರಿಂದ ಉಳಿದ ರಸ್ತೆ ಅಭಿವೃದ್ಧಿ ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.
ಹೆಚ್ಚುವರಿ ₹2.5 ಕೋಟಿ ಬೇಡಿಕೆ:
ಕಿನ್ನಾಳ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಇನ್ನೂ ₹ 2.5 ಕೋಟಿ ಅಗತ್ಯವಿದೆ ಎಂದು ಅಂದಾಜಿಸಿ, ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಲೋಕೋಪಯೋಗಿ ಇಲಾಖೆಯಿಂದ ಈ ಕುರಿತು ಇನ್ನೂ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ. ಹೀಗಾಗಿ, ಅನುದಾನದ ಕೊರತೆಯಿಂದ ಕಾಮಗಾರಿ ಅಪೂರ್ಣವಾಗುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಅರ್ಧ ರಸ್ತೆ ಏಕೆ?:
ಸುಮಾರು ಒಂದು ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕೇವಲ 600 ಮೀಟರ್ಗೆ ಮಾತ್ರ ಅವಕಾಶ ಕಲ್ಪಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಗೆ ನಿಗದಿಪಡಿಸಿದ ಅನುದಾನ ಸಾಕಾಗದಿರುವುದೇ ಇದಕ್ಕೆ ಕಾರಣವೇ ಅಥವಾ ಯೋಜನೆ ರೂಪಿಸುವಾಗಲೇ ಕಡಿಮೆ ಉದ್ದದ ರಸ್ತೆ ಆಯ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಈ ರಸ್ತೆಗೆ ಈಗಾಗಲೇ ಮೂರು ಬಾರಿ ಭೂಮಿ ಪೂಜೆ ನೆರವೇರಿಸಲಾಗಿದೆ. ಆದರೂ ಕಾಮಗಾರಿ ಸಮರ್ಪಕವಾಗಿ ಆರಂಭವಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಈಗ ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಅರ್ಧ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸುವುದಾದರೆ ಪ್ರಯೋಜನವೇನು? ರಸ್ತೆ ನಿರ್ಮಿಸುವುದಾದರೆ ಸಂಪೂರ್ಣವಾಗಿ ನಿರ್ಮಿಸಬೇಕು. ಇಲ್ಲವಾದರೆ ಕಾಮಗಾರಿಯಿಂದ ನಿರೀಕ್ಷಿತ ಪ್ರಯೋಜನ ಸಿಗುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿನ್ನಾಳ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.ಕಿನ್ನಾಳ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ರಸ್ತೆ ಅಗಲೀಕರಣದ ಕುರಿತು ನಗರಸಭೆಗೆ ಮಾಹಿತಿ ನೀಡಿಲ್ಲ ಎನ್ನುತ್ತಾರೆ ನಗರಸಭೆಯ ಕಿರಿಯ ಅಭಿಯಂತರ ಸೋಮಲಿಂಗಪ್ಪ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.