ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಬೇವಿನಹಳ್ಳಿ ಬಳಿ ಇರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟಿಸ್ ಕಾರ್ಖಾನೆ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈಗ ಗ್ರಾಹಕರ ಅತ್ಯಗತ್ಯಕ್ಕೆ ತಕ್ಕದೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಬೀಡುಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಸಾರ್ವಜನಿಕರ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ವಲಯದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ್, ಕಾರ್ಖಾನೆ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಮತ್ತು ಸಂಘ-ಸಂಸ್ಥೆಗಳ ಅಭಿಪ್ರಾಯ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದಾರೆ. ಇದರಿಂದ ಈ ಭಾಗ್ಯದಲ್ಲಿ ಉದ್ಯೋಗ ಹೆಚ್ಚಳವಾಗಲಿದೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ ಎನ್ನುವ ಅಭಿಪ್ರಾಯವನ್ನು ಎಲ್ಲರೂ ವ್ಯಕ್ತಪಡಿಸಿದರು.
ಕೊಪ್ಪಳದ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ವೈ.ಎಸ್. ಹರಿಶಂಕರ್ , ಕಾರ್ಖಾನೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕಾಗಿ ವಿಸ್ತರಣಾ ಯೋಜನೆ ವಿವರಿಸಿದರು.ಕಾರ್ಖಾನೆಯ ಪರಿಸರ ಅಧಿಕಾರಿ ಮಹಮದ್ ಅಜೀಜ್ ಮತ್ತು ತಾಂತ್ರಿಕ ಅಧಿಕಾರಿ ಶ್ರೀಕಾಂತ್ ಯೋಜಿತ ವಿಸ್ತರಣೆಯ ಕುರಿತು ಅಂಕಿ-ಅಂಶಗಳ ಸಮೇತ ಸಮಗ್ರ ವಿವರಣೆಯನ್ನು ನೀಡಿದರು. ಇದರಿಂದಾಗುವ ಉಪಯೋಗವನ್ನು ಸಹ ಎಳೆ ಎಳೆಯಾಗಿ ಬಿಡಿಸಿಟ್ಟರು.
ಹಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಬಳಿಕ ಮಾತನಾಡಿ, ಉದ್ದೇಶಿತ ಯೋಜನೆಗಳು ಅನುಷ್ಠಾನಗೊಂಡಲ್ಲಿ ಈ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತವೆ.ಯುವಕರಿಗೆ ಉದ್ಯೋಗಗಳು ಸಿಗುತ್ತವೆ, ಕಾರ್ಖಾನೆ ಸಮುದಾಯದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಂದ ಜನರ ಆರ್ಥಿಕ ಪ್ರಗತಿಗೆ ಪೂರಕವಾಗಿದೆ. ಹೀಗಾಗಿ, ಇದನ್ನು ವಿಸ್ತರಣೆ ಯೋಜನೆಯನ್ನು ಆದಷ್ಟು ಬೇಗನೆ ಮಾಡುವಂತೆ ಒತ್ತಾಯಿಸಿದರು.
ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಅನೂಕೂಲವಾಗಲಿದೆ ಎಂದು ಸಹ ಹೇಳಿದರು. ಇದರ ಮಧ್ಯೆಯೂ ಸಹ ಹಾಜರಿದ್ದ ಕೆಲವರು ಕಾರ್ಖಾನೆ ವಿಸ್ತರಣೆಯ ಜೊತೆಗೆ ಸಾರ್ವಜನಿಕವಾಗಿ ಇನ್ನೊಂದಿಷ್ಟು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಮಾನವ ಸಂಪನ್ಮೂಲ, ಆಡಳಿತ, ಇಎಚ್‌ಎಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ನಾರಾಯಣ ಕಾರ್ಯಕ್ರಮ ನಿರ್ವಹಿಸಿ, ಸಾರ್ವಜನಿಕರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ, ಬೆಂಬಲ ಕೋರಿದರು. ವ್ಯವಸ್ಥಾಪಕ ಉದ್ದವ ಕುಲಕರ್ಣಿ, ಕೊಪ್ಪಳ ಕಾಳಿದಾಸ ಶಿಕ್ಷಣ ಸಂಸ್ಥೆ, ಶ್ರೀ ಗ್ರಾಮದೇವತೆ ಸೇವಾ ಸಮಿತಿ ಹಳೆಕನಕಾಪುರ, ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಜಂಟಿ ಸಮಿತಿ, ನೀರು ಬಳಕೆದಾರರ ಸಂಘ ಹುಲಿಗಿ, ವನಲೋಕ, ಬೆಂಗಳೂರು ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘ, ಹೊಸಪೇಟೆ ಕರ್ನಾಟಕ ರಕ್ಷಣಾ ವೇದಿಕೆ, ಪ್ರಣತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ದೀಪಾ ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ವಿಜಯನಗರ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಧ್ರವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆ, ಕೊಪ್ಪಳ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಮುಂಡರಗಿ ಶ್ರೀ ಮಾರುತೇಶ್ವರ ಸೇವಾ ಸಮಿತಿ, ಬೇವಿನಹಳ್ಳಿ ಹಾಗೂ ಹಿಟ್ನಾಳ ಗ್ರಾಪಂಗಳು ಅನೇಕ ಸಂಘ-ಸಂಸ್ಥೆಗಳು, ಸಾರ್ವಜನಿಕರು ಇದ್ದರು.