ಮಹಿಳೆಯರ ಸಬಲೀಕರಣ ಕಿಸಾನ್‌ ಸಮ್ಮಾನ್ ಉದ್ದೇಶ

KannadaprabhaNewsNetwork | Published : Feb 26, 2025 1:04 AM

ಸಾರಾಂಶ

ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಮನಗರದ ಅಟಾರಿ ವಲಯ-11 ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪಿಎಂ ಕಿಸಾನ್ ಸಮ್ಮಾನ ನಿಧಿಯ-19ನೇ ಕಂತಿನ ಬಿಡುಗಡೆ ನೇರ ವೀಕ್ಷಣೆ ಸಮಾರಂಭ ನಡೆಯಿತು.

ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಮನಗರದ ಅಟಾರಿ ವಲಯ-11 ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪಿಎಂ ಕಿಸಾನ್ ಸಮ್ಮಾನ ನಿಧಿಯ-19ನೇ ಕಂತಿನ ಬಿಡುಗಡೆ ನೇರ ವೀಕ್ಷಣೆ ಸಮಾರಂಭ ನಡೆಯಿತು.

ಬಿಹಾರದ ಬಾಗಲ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 19ನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಉದ್ಘಾಟಿಸಿದ ನೇರ ಪ್ರಸಾರವನ್ನು ಜಿಲ್ಲೆಯ ರೈತರು ವೀಕ್ಷಿಸಿದರು.

ಕೃಷಿ ಮಹಾವಿದ್ಯಾಲಯ ಡೀನ್‌ ಡಾ.ಎನ್.ಬಿ.ಪ್ರಕಾಶ್‌ ಮಾತನಾಡಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ಲಕ್ಷಾಂತರ ರೈತರಿಗೆ ನೇರ ಆದಾಯ ನೀಡುವುದರ ಜೊತೆಗೆ ಗ್ರಾಮೀಣ ಕುಟುಂಬದ ಬೆನ್ನೆಲುಬಾಗಿದ್ದು, ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಮಹತ್ತರ ಹೆಜ್ಜೆಯಾಗಿದೆ. ರೈತರು ಕೃಷಿ ವಿಜ್ಞಾನ ಕೇಂದ್ರ ತರಬೇತಿಗಳಲ್ಲಿ ಹೆಚ್ಚಾಗಿ ಪಾಲ್ಗೊಂಡು ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿಯನ್ನು ಪಡೆಯುವಂತೆ ಕರೆ ನೀಡಿದರು.

ಜಿಲ್ಲೆ ಜಂಟಿ ಕೃಷಿ ನಿರ್ದೇಶಕರಾದ ಅಂಬಿಕಾ ಮಾತನಾಡಿ, ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಉಪಯೋಗವನ್ನು ಪಡೆಯುವ ರೀತಿ ಅರ್ಜಿಗಳನ್ನು ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ಸಲ್ಲಿಕೆಯ ವಿವರವನ್ನು ಕುರಿತು ಮಾಹಿತಿ ನೀಡಿದರು.

ತಾಲೂಕಿನ ಕೃಷಿಕ ಸಮಾಜದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ರೈತರು ಕೇಂದ್ರ ಸರ್ಕಾರದ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಅಧಿಕಾರಿಗಳ ನೆರವಿನಿಂದ ಪಡೆದುಕೊಳ್ಳಬೇಕೆಂದು ರೈತರಿಗಾಗಿ ನೀಡುತ್ತಿರುವ ಉತ್ತಮ ಯೋಜನೆಯಾಗಿದ್ದು ರಾಜ್ಯ ಸರ್ಕಾರ ಕೂಡ ಹಿಂದಿನ ಅವಧಿಯಲ್ಲಿ ನೀಡುತ್ತಿದ್ದ ಅನುದಾನ ರೀತಿಯಲ್ಲಿ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ.ಲತಾ ಕುಲಕರ್ಣಿ, ಕೇಂದ್ರದ ವಿಜ್ಞಾನಿ ಡಾ. ಸೌಜನ್ಯ ಎಸ್. ವಿಜ್ಞಾನಿ ಸಸ್ಯ ಸಂರಕ್ಷಣೆ ಡಾ. ರಾಜೇಂದ್ರ ಪ್ರಸಾದ್, ಕಲ್ಯಾ ಗ್ರಾಪಂ ಅಧ್ಯಕ್ಷರಾದ ಬಿ.ಕೆ.ಕುಮಾರ್, ಕೃಷಿಕ ಸಮಾಜದ ಖಜಾಂಚಿ ತೋಟದಮನೆ ಗಿರೀಶ್‌, ಪ್ರಗತಿಪರ ಕೃಷಿಕರಾದ ಶಿವರಾಮಯ್ಯ, ರಾಮಚಂದ್ರಯ್ಯ, ಚಂದ್ರಯ್ಯ, ಗೀತಾಂಜಲಿ, ಕೇಂದ್ರದ ವಿಜ್ಞಾನಿಗಳಾದ ಡಾ.ದೀಪಾ ಪೂಜಾರ, ಪ್ರೀತು ಡಿ. ಸಿ., ಡಾ.ದಿನೇಶ್ ಎಂ.ಎಸ್., ಕೆವಿಕೆ ಸಿಬ್ಬಂದಿ ಮತ್ತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ವಿಜಯಾ ಸವಣೂರು, ಸಹಾಯಕ ಕೃಷಿ ನಿರ್ದೇಶಕ ವಿಜಯೇಂದ್ರ ಹೆಗಡೆ, ಜಾಗೃತ ದಳ, ಸಹಾಯಕ ಕೃಷಿ ನಿರ್ದೇಶಕರಾದ ಶಶಿಕಲಾ ಮತ್ತು ಜಿಲ್ಲೆಯ 80ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಿಎಂ ಕಿಸಾನ್ ಸಮ್ಮಾನದ ನಿಧಿಯ-19ನೇ ಕಂತಿನ ಬಿಡುಗಡೆಯ ನೇರ ವೀಕ್ಷಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

Share this article