ಕಿತ್ರೆ ದೇವಿಮನೆ ದೇವಿ ರಥೋತ್ಸವ ಅದ್ಧೂರಿ ಸಂಪನ್ನ

KannadaprabhaNewsNetwork |  
Published : Jan 28, 2026, 03:00 AM IST
ಪೊಟೊ ಪೈಲ್ : 27ಬಿಕೆಲ್1 | Kannada Prabha

ಸಾರಾಂಶ

ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ದೇವಸ್ಥಾನದ ತಾಂತ್ರಿಕ ವೇ.ಮೂ. ಅಮೃತೇಶ್ ಭಟ್ಟ ಗೋಕರ್ಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ನೇತೃತ್ವದಲ್ಲಿ ಜರುಗಿತು. ನೂರಾರು ಜನರು ರಥ ಕಾಣಿಕೆ ಸಲ್ಲಿಸಿದರು. ಮಂಗಳವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಗಣೇಶ ಪೂಜೆ, ಪುಣ್ಯಾಹ, ರುದ್ರಹವನದ ಮಹಾಸಂಕಲ್ಪ, ಶ್ರೀದೇವರಿಗೆ ಕಲಾವೃದ್ಧಿ-ಯಾದಿ ಹವನ, ವೀರಭದ್ರ ದೇವರ ಪ್ರೀತ್ಯರ್ಥ ರುದ್ರವನದ ಪೂರ್ಣಾಹುತಿ ನಡೆಯಿತು. ರಥೋತ್ಸವದಲ್ಲಿ ದೇವಸ್ಥಾನದ ಮೊಕ್ತೇಸರ ಉಮೇಶ್ ಹೆಗಡೆ, ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಉಪಾಧ್ಯಕ್ಷ ಪರಮೇಶ್ವರ ಭಟ್ಟ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ವಲಯದ ಅಧ್ಯಕ್ಷ ವಿಘ್ನೇಶ್ವರ ಉಪಾಧ್ಯಾಯ, ಕಾರ್ಯದರ್ಶಿ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ.ಎಂ. ಹೆಬ್ಬಾರ್, ನಾರಾಯಣ ಹೆಬ್ಬಾರ ಬೆಣಂದೂರು, ರಾಧಾಕೃಷ್ಣ ಬೆಂಗಳೂರು, ರಾಜಶೇಖರ ಹೆಬ್ಬಾರ ಉಡುಪಿ, ಅನಂತ ಹೆಬ್ಬಾರ, ಗಣೇಶ ಹೆಬ್ಬಾರ, ಶ್ರೀನಿವಾಸ ಹೆಗಡೆ, ಅಶೋಕ ಭಟ್ಟ, ಗಣಪಯ್ಯ ಹೆಗಡೆ, ಶಿವಾನಂದ ಹೆಬ್ಬಾರ, ಎಂ.ವಿ. ಭಟ್ಟ ಮುಂತಾದವರಿದ್ದರು. ಮಧ್ಯಾಹ್ನ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್‌ ಮೇಲಿನ ಮಣ್ಣಿಗೆ ಹೊನ್ನಾವರ ಇವರಿಂದ ನಡೆದ ವರದಯೋಗಿ ಶ್ರೀಧರ ನಾಟಕ ಪ್ರದರ್ಶನ ಪ್ರೇಕ್ಷಕರ ಮನರಂಜಿಸಿತು.

ಕಿತ್ರೆ ದೇವಿಮನೆ ದಿವ್ಯಸ್ವರೂಪದ ಪುಣ್ಯ ಕ್ಷೇತ್ರ: ರಾಘವೇಶ್ವರ ಶ್ರೀ

ಜಾಗೃತ ಭಕ್ತ ವರ್ಗವನ್ನು ಹೊಂದಿರುವ ಕಿತ್ರೆಯ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ವಿಷ್ಣು, ಈಶ್ವರ, ದುರ್ಗೆ ಹೀಗೆ ಮೂರು ಸ್ವರೂಪ ಹೊಂದಿರುವ ದಿವ್ಯಸ್ವರೂಪದ ಕ್ಷೇತ್ರವಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.ಕಿತ್ರೆ ದೇವಿಮನೆಯಲ್ಲಿ ವರ್ಧಂತ್ಯುತ್ಸವ, ರಥೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಿಮನೆ ಕ್ಷೇತ್ರ ಸ್ವಯಂಭೂ ಲಿಂಗ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ಸರ್ವಶಕ್ತಿ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಎಲ್ಲರ ಸಹಕಾರದಿಂದ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಈ ದೇವಿಯಲ್ಲಿ ಭಕ್ತಯಿಂದ ಬೇಡಿಕೊಂಡರೆ ಸರ್ವ ಸಮಸ್ಯೆಗೂ ಪರಿಹಾರ ಸಿಗಲಿದೆ. ನಮ್ಮಲ್ಲಿರುವ ಎಲ್ಲಾ ಭಯವೂ ದೂರವಾಗಲಿದೆ ಎಂದ ಅವರು ಕುಲದೇವಿ ಎಂದಿಗೂ ಬದುಕಿನ ತಾಯಿ ಇದ್ದಂತೆ. ಈಕೆಯನ್ನು ಸಮರ್ಪಣಾ ಭಾವದಿಂದ ಬೇಡಿಕೊಳ್ಳಬೇಕು. ಹಿಂದಿದ್ದ ದೇವಿಮನೆಗೂ ಈಗಿನ ದೇವಿಮನೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಳೇಯ ದೇವಸ್ಥಾನವೊಂದು ಹೇಗೆ ಅಭಿವೃದ್ಧಿಯಾಗಿದೆ ಎನ್ನುವುದನ್ನು ದೇವಿಮನೆ ದೇವಸ್ಥಾನವೇ ಸಾಕ್ಷಿಯಾಗಿದೆ. ದೇವಿಮನೆಯಲ್ಲಿ ವಿಶಾಲ ಜಾಗವಿದ್ದು, ಇಲ್ಲಿ ಸದಾ ಭಕ್ತಿಭಾವ, ಶುಚಿತ್ವ, ಸ್ವಚ್ಛತೆ ಕಾಣಬಹುದು. ದಿವ್ಯ ಸ್ವರೂಪ ಹೊಂದಿರುವ ದೇವಿಮನೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲಿದ್ದು, ಎಲ್ಲರ ಸಹಕಾರ ಅಗತ್ಯವೆಂದರು. ದೇವಿಮನೆ ಆಡಳಿತ ಮಂಡಳಿಯಿಂದ ಸಾಧಕ ಪ್ರಶಸ್ತಿ ಪಡೆದ ಉದ್ಯಮಿ ಅಶೋಕ ಭಟ್ಟ ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಅವರು ಸಭಾ ಪೂಜೆ ನೆರವೇರಿಸಿ ಸ್ವಾಗತಿಸಿದರು. ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ವರದಿ ವಾಚಿಸಿ, ವಂದಿಸಿದರು. ಶುಭಾ ದೇಸಾಯಿ ನಿರೂಪಿಸಿದರು. ಹವ್ಯಕ ಕ್ರೀಡೋತ್ಸವದಲ್ಲಿ ವಿಜೇರಾದವರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ