ಇಂದಿನಿಂದ ಮೂರು ದಿನಗಳ ಕಿತ್ತೂರು ಉತ್ಸವ

KannadaprabhaNewsNetwork | Published : Oct 23, 2024 12:48 AM

ಸಾರಾಂಶ

ಕಿತ್ತೂರ‌ ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅ.23ರಿಂದ 25ರವರೆಗೆ ಮೂರು ದಿನ ಈ ಉತ್ಸವ ಜರುಗಲಿದೆ.

ಸೋಮಶೇಖರ ಕುಪ್ಪಸಗೌಡ್ರ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಕಿತ್ತೂರ‌ ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅ.23ರಿಂದ 25ರವರೆಗೆ ಮೂರು ದಿನ ಈ ಉತ್ಸವ ಜರುಗಲಿದೆ.ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಸ್ತೆಯುದ್ದಕ್ಕೂ ನಕ್ಷತ್ರಗಳ ಸರಮಾಲೆಯಂತೆ ವಿದ್ಯುತ್ ಅಲಂಕಾರ ಕಂಗೊಳಿಸುತ್ತಿದೆ. ಐತಿಹಾಸಿಕ ಕೋಟೆಯ ವಿಶೇಷ ಅಲಂಕಾರ, ಚನ್ನಮ್ಮಾಜಿಯ ಸಂಸ್ಥಾನದ ಗತವೈಭವವನ್ನು ಸಾರುವಂತಾಗಿದ್ದು, ಕಿತ್ತೂರು ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ವೀರ ಮಾತೆ ಚನ್ನಮ್ಮಾಜಿಯ ಹೋರಾಟ ಹಾಗೂ ಯುದ್ಧ ಗೆದ್ದು ಬಂದ ಹಿನ್ನೆಲೆಯಲ್ಲಿ ಅ.23 ರಿಂದ 25ರವರೆಗೆ ಪ್ರತಿವರ್ಷ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ವಿಶೇಷ ಅಂದರೆ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಗೆಲವು ಸಾಧಿಸಿ ಇಂದಿಗೆ 200 ವರ್ಷಗಳು ತುಂಬಿಗ ಹಿನ್ನೆಲೆಯಲ್ಲಿ ಹಲವಾರು ವಿಶೇಷತೆಗಳಿಂದ ಕೂಡಿದೆ. ಇನ್ನೇನು ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಇಂದೇನು ಕಾರ್ಯಕ್ರಮಗಳು ನಡೆಯಲಿವೆ?:

ಅ.23 ರಂದು ಬೆಳಗ್ಗೆ 10ಕ್ಕೆ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಲದಲ್ಲಿ ಸಂಸ್ಥಾನದ ಧ್ವಜಾರೋಹಣ ಹಾಗೂ ವಿಜಯಜ್ಯೋತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ವಾಗತ ಕೋರಲಿದ್ದಾರೆ. ಈ ಸಂದರ್ಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಸ್ವಾಗತ ಕೋರಲಿದ್ದಾರೆ.ನಂತರ ಜಾನಪದ ಕಲಾವಾಹಿನಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಲಿದ್ದು ಫಲ ಪುಷ್ಪ ಪ್ರದರ್ಶನವನ್ನು ಸಂಸದೆ ಪ್ರಿಯಾಂಕ ಜಾರಕಿಹೊಳಿ, ವಸ್ತು ಪ್ರದರ್ಶನವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರೋಗ್ಯ ಮೇಳವನ್ನು ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಕ್ರೀಡೆ ಮತ್ತು ದೋಣಿ ವಿಹಾರವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಉದ್ಘಾಟಿಸಲಿದ್ದಾರೆ.ಈ ಬಾರಿಯೂ ಉತ್ಸವದಲ್ಲಿ 2 ವೇದಿಕೆಗಳನ್ನು ನಿರ್ಮಿಸಲಾಗಿದ್ದು ರಾಣಿ ಚನ್ನಮ್ಮಾಜಿಯ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಂಜೆ 6ಕ್ಕೆ ಚಿತ್ರ ನಟ ದಿಗಂತ್, ಐಂದ್ರಿತಾ, ಚಂದನ ಶೆಟ್ಟಿ ಹಾಗೂ ಹಾಸ್ಯಗಾರ ಯೋಗಿಗೌಡ ತಂಡದಿಂದ ರಸಮಂಜರಿ ಮೂಡಿಬರಲಿದೆ. ಇದೆ ಪ್ರಮುಖ ವೇದಿಕೆಯಲ್ಲಿ ಸಂಜೆ 7:30ಕ್ಕೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ಸವ ಉದ್ಘಾಟನೆ ಮಾಡಲಿದ್ದು ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ವಿವಿಧ ಇಲಾಖೆಯ ಸಚಿವರು ಸಂಸದರು, ಶಾಸಕರು ಭಾಗಿಯಾಗಲಿದ್ದಾರೆ. ಕಲ್ಮಠ ಶ್ರಿಗಳು, ನಿಚ್ಚಣಕಿಯ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿರುವರು.ಬಿಗಿ ಪೊಲೀಸ್‌ ಬಂದೋಬಸ್ತ್‌:

ಪೊಲೀಸ್ ಇಲಾಖೆ ಕೂಡ ಬಿಗಿ ಭದ್ರತೆ ಒದಗಿಸಲು ಸನ್ನದ್ಧಗೊಂಡಿದೆ. ಉತ್ಸವದಲ್ಲಿ ಕ್ವೀಕ್ ರೆಸ್ಪಾನ್ಸ್‌ (ಶೀಘ್ರ ಪ್ರತಿಕ್ರಿಯೆ) ಟೀಂ ಮಾಡಲಾಗಿದೆ. ಅಲ್ಲದೆ ವಿವಿಧ ಜಿಲ್ಲೆಗಳಿಂದ ನುರಿತ ಅಪರಾಧ ತಡೆ ಸಿಬ್ಬಂದಿಯೂ ಕೈಯಲ್ಲಿ ಫಿಂಗರ್‌ ಸ್ಕ್ಯಾನರ್ ಹಿಡಿದು ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ನಡೆಸಲಿದೆ.ಕಂಗೊಳಿಸುತ್ತಿದೆ ಕಿತ್ತೂರು:

ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಲದಲ್ಲಿ ವೀರ ಮಾತೆಯ ಜ್ಯೋತಿಯ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ವಿದ್ಯುತ್ ಅಲಂಕಾರವನ್ನು ಪಟ್ಟಣ ಪ್ರಮುಖ ಬೀದಿಗಳಲ್ಲಿ ಮಾಡಲಾಗಿದೆ. ವಿವಿಧ ಬಣ್ಣ ಬಣ್ಣಗಳ ವಿದ್ಯುದೀಪಗಳಿಂದ ಕಂಗೊಳಿಸುತ್ತಿರುವ ಕಿತ್ತೂರು ಕೋಟೆ, ಕೋಟೆಯ ಆವರಣ, ಕಾವಲುಗೋಪುರ, ವಸ್ತುಸಂಗ್ರಹಾಲಯ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಂಗೊಳಿಸುತ್ತಿವೆ. 6000 ಬಲ್ಪ್‌, 3000 ಎಲ್‌ಇಡಿ ಥ್ರೀಡಿ ಡಿಸೈನ್ ಲೈಟಿಂಗ್, 6000 ಲೈಟ್‌ ಸರಗಳನ್ನು ಅಳವಡಿಸಲಾಗಿದೆ.

ಅಲ್ಲದೆ ಸಂಸ್ಥಾನದ ಇತಿಹಾಸ ಸಾರುವ ರಾಣಿ ಚನ್ನಮ್ಮಾಜಿಯ ವಿವಿಧ ಹೋರಾಟಗಾರರ ಹಾಗೂ ಯುದ್ದದ ಸನ್ನಿವೇಶಗಳನ್ನು ಸಾರುವ ವರ್ಣರಂಜಿತ ಚಿತ್ರಗಳನ್ನು ಹೆದ್ದಾರಿಯ ವಿವಿಧ ಗೋಡೆಗಳ ಮೇಲೆ ಬಿತ್ತರಿಸಲಾಗಿದೆ. ಅಲ್ಲದೆ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ಪುತ್ಥಳಿಯನ್ನು ಹಾಗೂ ಸೋಮವಾರ ಪೇಟೆಯ ಚನ್ನಮ್ಮಾಜಿಯ ಪುತ್ಥಳಿಗಳನ್ನು ಸಿಂಗರಿಸಿದ್ದಾರೆ.ಸೂಕ್ತ ಪಾರ್ಕಿಂಗ್, ಬಂದೋಬಸ್ತ್‌: ಟ್ರಾಫಿಕ್ ನಿಯಂತ್ರಿಸಲು ಪೊಲೀಸ್ ಇಲಾಖೆ ಸಿದ್ಧಗೊಂಡಿದೆ. ಹೆದ್ದಾರಿ ಮಾರ್ಗದಿಂದ ಬರುವ ಜನರಿಗೆ ರಾಣಿ ಪ್ಯಾಲೇಸ್‌ ಬಳಿ, ಎಪಿಎಂಸಿ ಹಾಗೂ ತಹಶೀಲ್ದಾರ ಕಚೇರಿಯ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಬೈಲಹೊಂಗಲ ಕಡೆಯಿಂದ ಆಗಮಿಸುವ ಜನರಿಗೆ ಗಡಗಿ ಆಸ್ಪತ್ರೆ ಬಳಿ ಇರುವ ಖುಲ್ಲಾ ಜಾಗದಲ್ಲಿ ಹಾಗೂ ಪೊಲೀಸ್ ಠಾಣೆಯ ಗ್ರೌಂಡ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ನಿಚ್ಚಣಕಿ ಹಾಗೂ ಡೊಂಬರಕೊಪ್ಪ ಮಾರ್ಗದಿಂದ ಬರುವ ಜನತೆಗೆ ಪಪಂ ಬಳಿ ಇರುವ ಜಾಗದಲ್ಲಿ ಹಾಗೂ ದ್ವಿಚಕ್ರ ವಾಹನಗಳಿಗೆ ಕಲ್ಮಠದ ಬಳಿ ಇರುವ ಜಾಗದಲ್ಲಿ ಮಾಡಲಾಗಿದೆ ಎಂದು ಸಿಪಿಐ ಶಿವಾನಂದ ಗುಡಿಗನಟ್ಟಿ ತಿಳಿಸಿದ್ದಾರೆ.

ಉತ್ಸವಕ್ಕೆ ಬರುವ ಜನರ ಹಿತದೃಷ್ಟಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದ್ದು 2 ಡಿಎಸ್ಪಿ, 9 ಸಿಪಿಐ, 26 ಪಿಎಸೈ, 500 ಸಿಬ್ಬಂದಿ ಹಾಗೂ 4 ಕೆಎಸ್‌ಆರ್‌ಪಿ ತುಕಡಿ ಹಾಗೂ 4 ಡಿಎಆರ್ ತುಕಡಿ ಸಿಬ್ಬಂದಿ ಉತ್ಸವದಲ್ಲಿ ಭದ್ರತೆ ಒದಗಿಸಲಿದ್ದಾರೆ. ಜತೆಗೆ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಹದ್ದಿನ ಕಣ್ಣಿಡಲಿವೆ ಎಂದು ಮಾಹಿತಿ ನೀಡಿದರು.

Share this article