ಕಿತ್ತೂರು ಕರ್ನಾಟಕ ಬೃಹತ್ ಜನತಾ ಸಮಾವೇಶ

KannadaprabhaNewsNetwork |  
Published : Feb 28, 2026, 03:00 AM IST
ಯಶವಂತರಾಯಗೌಡ | Kannada Prabha

ಸಾರಾಂಶ

ಪಕ್ಷಕ್ಕೆ ಮತ್ತೆ ಶಕ್ತಿ ತುಂಬಬೇಕು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಲ ನೀಡಬೇಕು ಎಂಬ ಉದ್ದೇಶದೊಂದಿಗೆ ಜಾತ್ಯತೀತ ಜನತಾದಳವು ಬೆಳ್ಳಿ ಹಬ್ಬದ ನಿಮಿತ್ತವಾಗಿ ಶುಕ್ರವಾರ ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಜನತಾ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಕ್ಷಕ್ಕೆ ಮತ್ತೆ ಶಕ್ತಿ ತುಂಬಬೇಕು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಲ ನೀಡಬೇಕು ಎಂಬ ಉದ್ದೇಶದೊಂದಿಗೆ ಜಾತ್ಯತೀತ ಜನತಾದಳವು ಬೆಳ್ಳಿ ಹಬ್ಬದ ನಿಮಿತ್ತವಾಗಿ ಶುಕ್ರವಾರ ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಜನತಾ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಿತು.

ನಗರದ ಸಿಂದಗಿ ಬೈಪಾಸ್ ರಸ್ತೆ ಬಳಿ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಹಾಗೂ ಕಿತ್ತೂರು ಕರ್ನಾಟಕ ಬೃಹತ್ ಜನತಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಯುವನಾಯಕ ನಿಖಿಲ ಕುಮಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ನೀಡಿದ ಕೊಡುಗೆಗಳ ಕುರಿತು ರಚಿತವಾದ 3 ಕಿರು ಹೊತ್ತಗೆಗಳನ್ನು ಬಿಡುಗಡೆಗೊಳಿಸಲಾಯಿತು.

ಸಮಾವೇಶದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಂಶಪೂರ, ವೆಂಕಟರಾವ ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚವ್ಹಾಣ, ಮುಖಂಡರಾದ ಅಪ್ಪುಗೌಡ ಪಾಟೀಲ, ಸುನಿತಾ ಚವ್ಹಾಣ, ನಾನಾಗೌಡ ಪಾಟೀಲ, ಬಿ.ಡಿ.ಪಾಟೀಲ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅನೇಕ ನಾಯಕರು ಹಾಗೂ ಲಕ್ಷಾಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

ಬಸವನಾಡಿನಲ್ಲಿ ಜೆಡಿಎಸ್ ಅಬ್ಬರ

ಬಸವನಾಡು ಎಂದು ಕರೆಸಿಕೊಳ್ಳುವ ವಿಜಯಪುರ ನಗರದಲ್ಲಿ ಶುಕ್ರವಾರ ಜೆಡಿಎಸ್ ಕಲ್ಯಾಣ ಕರ್ನಾಟಕ ಸಮಾವೇಶ ಮಾಡುವ ಮೂಲಕ ಅಬ್ಬರಿಸಿತು. ಈ ಮೂಲಕ ಮುಂದಿನ ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆಗಳಿಗೆ ತಯಾರಿಗೆ ಅಡಿಪಾಯ ಹಾಕುವ ಯತ್ನ ಮಾಡಿತು. ಮಾಜಿ ಪ್ರಧಾನಿ ದೇವೇಗೌಡರು ಜಿಲ್ಲೆಗೆ ನೀಡಿದ ನೀರಾವರಿ ಕೊಡುಗೆ ಹಾಗೂ ಕುಮಾರಸ್ವಾಮಿಯವರು ಕೊಟ್ಟ ರೈತರ ಸಾಲಮನ್ನಾ ಸೇವೆಯನ್ನು ನೆನಪಿಸಿದರು. ವಿಜಯಪುರ-ಬಾಗಲಕೋಟೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಇಂದಿನ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಕಾರ್ಯಕರ್ತರಲ್ಲಿ ಹುರುಪು ತಂದ ಸಮಾವೇಶ:

ವಿಧಾನಸಭೆ ಚುನಾವಣೆ ಬಳಿಕ ಈ ಭಾಗದಲ್ಲಿ ಸೂಪ್ತ ಸ್ಥಿತಿಗೆ ತಲುಪಿದ್ದ ಜೆಡಿಎಸ್ ಜಿಲ್ಲಾ ಘಟಕದಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳು ಕಂಡಿರಲಿಲ್ಲ. ಈ ಹಿಂದೆ ಪಕ್ಷ ಸಂಘಟನೆಗೆ ವಿಜಯಪುರಕ್ಕೆ ಬಂದಿದ್ದ ನಿಖಿಲ ಕುಮಾರಸ್ವಾಮಿಯವರು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅಡಿಪಾಯವಿದೆ ಎಂದಿದ್ದರು. ಅದರಂತೆ ಇದೀಗ ಇಲ್ಲಿಯೇ ಕಲ್ಯಾಣ ಕರ್ನಾಟಕದ ಸಮಾವೇಶ ಆಯೋಜಿಸುವ ಮೂಲಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರಿಗೆ ಹೊಸ ಶಕ್ತಿ ತುಂಬಿದ್ದಾರೆ. ಅಲ್ಲದೆ ಇನ್ನುಮುಂದೆ ಕಾಂಗ್ರೆಸ್ ವಿರುದ್ಧ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜೆಡಿಎಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ನಿಖಿಲ ಕುಮಾರಸ್ವಾಮಿ ಹೇಳಿದರು.

ಮೂಲೆ ಮೂಲೆಯಿಂದ ಬಂದ ಕಾರ್ಯಕರ್ತರು:

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ ಮಧ್ಯಾಹ್ನ 1ಗಂಟೆ ವೇಳೆಗೆ ಆರಂಭವಾಯಿತು. ಈ ವೇಳೆ ವ್ಹೀಲ್ ಚೇರ್‌ನಲ್ಲಿ ಬಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜನರತ್ತ ಕೈಬೀಸಿದರು. ನಾಗಠಾಣ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಯಿಂದ ಮಹಿಳೆಯರು, ಯುವಕರು ಸೇರಿದಂತೆ ಸಾವಿರಾರು ಜನರು ಕ್ರೂಸರ್‌ ಜೀಪ್, ಟ್ರ್ಯಾಕ್ಟರ್‌, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ಆಗಮಿಸಿದ್ದರು. ಸಮಾವೇಶದ ಎರಡು ಭಾಗಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾವೇಶಕ್ಕೆ ಬಂದವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಪೊಲೀಸ್ ಭದ್ರತೆ ಕೈಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ ಕುಡಿವ ನೀರಿನ ಬಗ್ಗೆ ಎಚ್ಚರವಿರಲಿ
ಶಾಲಾ ಕಾಲೇಜುಗಳು ಮೊದಲು ನಶಾಮುಕ್ತವಾಗಲಿ:ಡಾ.ಭಗವಾನ್