ಕೊಪ್ಪಳ: ಭಾರತದಲ್ಲಿ ಸಾವಿರಾರು ರಾಜ ಸಂಸ್ಥಾನಗಳಿದ್ದರೂ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದ ಕೆಚ್ಚೆದೆಯ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ರಾಜಮನೆತನಗಳು ಭಾಗಿಯಾಗಿರುವುದನ್ನು ನಾವು ಕಾಣಬಹುದು. ಅದರಲ್ಲೂ ತುಂಬಾ ವಿಶೇಷವಾಗಿ ಕಿತ್ತೂರು ಸಂಸ್ಥಾನ ಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಯುದ್ದದಲ್ಲಿ ವಿಜಯವನ್ನು ಸಾಧಿಸಿರುವುದನ್ನು ನಾವು ಕಾಣುತ್ತೇವೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಜೊತೆಗೆ ಅವರ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣನವರ ಸಾಹಸವನ್ನೂ ನಾವು ಸ್ಮರಿಸಬೇಕಿದೆ. ಹಾಗಾಗಿ ನಮ್ಮ ಸರ್ಕಾರ ಕಿತ್ತೂರು ಮತ್ತು ಸಂಗೊಳ್ಳಿ ಅಭಿವೃದ್ಧಿಗಾಗಿ ಸುಮಾರು ₹34 ಕೋಟಿ ಅನುದಾನವನ್ನು ನೀಡಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮಹಿಳೆಯರೂ ಕೆಚ್ಚೆದೆಯಿಂದ ಹೋರಾಡಬಲ್ಲರು ಎಂದು ತೋರಿಸಿಕೊಟ್ಟರು. 2017ರಲ್ಲಿ ನಮ್ಮ ಸರ್ಕಾರ ರಾಣಿ ಚೆನ್ನಮ್ಮನ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಆದೇಶವನ್ನು ಹೊರಡಿಸಿತು. ಅವರಂತಹ ಸಾಹಸಿಗರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಪಂಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಸ್ವಾತಂತ್ಯ ಪೂರ್ವ ನಮ್ಮ ದೇಶದಲ್ಲಿದ್ದ ಸುಮಾರು 500ಕ್ಕೂ ಅಧಿಕ ರಾಜ ಸಂಸ್ಥಾನಗಳಲ್ಲಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ. ಆಗ ಅನೇಕ ರಾಜರು ಬ್ರಿಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ, ಚೆನ್ನಮ್ಮ ರಾಜಿ ಆಗದೆ, ಸ್ವಾತಂತ್ರ‍್ಯವನ್ನು ಬಯಸಿ, ಅವರ ವಿರುದ್ಧ ಹೋರಾಡಿದರು ಎಂದರು.
ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪೂರ ಅವರು ಕಿತ್ತೂರ ಚೆನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.