ಯುವತಿಯರು ಚೆನ್ನಮ್ಮನ ಆದರ್ಶ ಮೈಗೂಡಿಸಿಕೊಳ್ಳಿ: ಶೀವಲೀಲಾ

KannadaprabhaNewsNetwork | Published : Nov 4, 2023 12:32 AM

ಸಾರಾಂಶ

ಬೀದರ್‌ನಲ್ಲಿ ಅದ್ಧೂರಿಯಾಗಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿರಾಣಿ ಚೆನ್ನಮ್ಮನ ವೇಷಧಾರಿಯಲ್ಲಿ ಮಕ್ಕಳು ಭಾಗಿ
ಬೀದರ್: ರಾಣಿ ಚನ್ನಮ್ಮಳಂಥವರ ಆದರ್ಶವನ್ನು ಇಂದಿನ ಯುವತಿಯರು ಮೈಗೂಡಿಸಿಕೊಂಡಲ್ಲಿ ಮಹಿಳೆಯರು ತಮ್ಮ ಆತ್ಮ ರಕ್ಷಣೆ ತಾವೇ ಮಾಡಿಕೊಳ್ಳಬಹುದು ಎಂದು ಸಾಹಿತಿ ಡಾ.ಶಿವಲೀಲಾ ಮಠಪತಿ ಹೇಳಿದರು.. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ಬಸವನಗರ ವಿಕಾಸ ಸಮಿತಿ, ವಿದ್ಯಾನಗರ ವಿಕಾಸ ಸಮಿತಿ ಹಾಗೂ ಬಸವ ಸಮಿತಿ ಹಾರೂರಗೇರಿಗಳ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಡಿದ ಅವರು, ಕಿತ್ತೂರು ವಿಷಯದಲ್ಲೂ ಬುದ್ಧಿಶಕ್ತಿ ಕೊರತೆ ಹಾಗೂ ಅಲ್ಲಿಯ ಬಂಟರ ಮೋಸಗಾರಿಕೆಯಿಂದ ಚೆನ್ನಮ್ಮಳ ಬಂಧನವಾಯಿತು ಎಂದರು. ಝಾನ್ಸಿರಾಣಿ ಲಕ್ಷ್ಮಿಬಾಯಿಯ ನಂತರದ ಸಾಲಿನಲ್ಲಿ ನಿಲ್ಲುವವಳೆ ಕಿತ್ತೂರು ರಾಣಿ ಚೆನ್ನಮ್ಮ. ಅವರು ದೇಶಕ್ಕಾಗಿ ಹೋರಾಟ ನಡೆಸಿದರೆ ನಮ್ಮ ಮಹಿಳೆಯರು ಅಡುಗೆ ಮನೆಯಲ್ಲಿ ಜಗಳವಾಡುವುದುಂಟು. ಒಟ್ಟಾರೆ ಹೇಳಬೇಕಾದರೆ ಹಿರಿಯರು ಹಾಗೂ ಯುವಜನರ ಮಧ್ಯದ ಬಾಂಧವ್ಯ ಕುಗ್ಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಖ್ಯ ಸಂಘಟಕರು ಹಾಗೂ ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿ, ಕಳೆದ 10 ವರ್ಷಗಳಿಂದ ಇದೇ ಜಾಗದಲ್ಲಿ ವೀರರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ ಬಿಟ್ಟರೆ ಬೀದರ್‌ನಲ್ಲಿ ಮಾತ್ರ ಚೆನ್ನಮ್ಮ ಕಂಚಿನ ಮೂರ್ತಿ ಸ್ಥಾಪಿಸಲಾಗುತ್ತಿದೆ ಎಂದರು. ಡಾ. ಎಚ್.ಆರ್ ಮಹಾದೇವ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೊಮ್ಮಗೊಂಡೇಶ್ವರ ವೃತ್ತದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗಿನ ರಸ್ತೆಯನ್ನು ಚೆನ್ನಮ್ಮ ರಸ್ತೆ ಎಂದು ಜಿಲ್ಲಾಡಳಿತದ ದಾಖಲೆಯಲ್ಲಿ ನಮೂದಿಸಿದ್ದಾರೆ. ವಿದ್ಯಾನಗರದ ಈ ಭಾಗವನ್ನು ಕಿತ್ತೂರು ರಾಣಿ ಚೆನ್ನಮ್ಮ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ. ಹೀಗೆ ರಾಣಿ ಚನ್ನಮ್ಮಳ ಹೆಸರಿನಲ್ಲಿ ಸಾಕಷ್ಟು ಕೆಲಸ ಕಾರ್ಯ ನಡೆದಿವೆ ಎಂದರು. ಈ ಸಂದರ್ಭದಲ್ಲಿ ಸುವರ್ಣಾ ಚಿಮಕೊಡೆ ಹಾಗೂ ಖ್ಯಾತ ಸಂಗೀತದ ಧ್ರುವತಾರೆ ಕು.ಶಿವಾನಿ ಶಿವದಾಸ ಸ್ವಾಮಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯರಾದ ಸಂತೋಷಿ ಅರುಣಕುಮಾರ, ಶಶಿ ಹೊಸಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಸವ ಸಮಿತಿ ಹಾರೂರಗೇರಿ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ವಿದ್ಯಾನಗರದ ಬಸವಣಪ್ಪ ನೇಳಗೆ, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆಯ ಅಧ್ಯಕ್ಷ ಚಂದ್ರಶೇಖರ ತಾಂಡೂರೆ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಸೇರಿದಂತೆ ಸುತ್ತಲಿನ ಬಡಾವಣೆಗಳ ನೂರಾರು ಜನರು ಭಾಗವಹಿಸಿದ್ದರು. ಆರಂಭದಲ್ಲಿ ಸಿದ್ದಗಂಗಾ ಶಾಲೆಯ ಸಂಗೀತ ವಿದ್ಯಾರ್ತಿಗಳಿಂದ ಪ್ರಾರ್ಥನೆ ಜರುಗಿತು. ಶರಣಯ್ಯ ಸ್ವಾಮಿ ಸ್ವಾಗತಿಸಿದರು. ಪ್ರೊ.ರೇಣುಕಾ ಮಳ್ಳಿ ನಿರೂಪಿಸಿ, ವೀಣಾ ಜಲಾದೆ ವಂದಿಸಿದರು. ಇದಕ್ಕೂ ಮುನ್ನ ರೇವಣಸಿದ್ದಪ್ಪ ಜಲಾದೆ ನೇತೃತ್ವದಲ್ಲಿ ಬಸವನಗರದ ಬಸವೇಶ್ವರ ದೇವಸ್ಥಾನದಿಂದ ಚನ್ನಮ್ಮಳ ಭವ್ಯ ಮೆರವಣಿಗೆ ಆರಂಭವಾಯಿತು. ಸಾಹಿತಿ ಭಾರತಿ ವಸ್ತ್ರದ ಹಾಗೂ ಶಿಕ್ಷಣ ತಜ್ಞೆ ರತ್ನಾ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಕಾಳಿದಾಸ ನಗರ ಮಾರ್ಗವಾಗಿ ರಾಮಚೌಕ್ ಮೂಲಕ ಹಾದು ಕಿತ್ತೂರು ರಾಣಿ ಚನ್ನಮ್ಮಳ ವೃತ್ತಕ್ಕೆ ಬಂದು ತಲುಪಿತು.

Share this article