ಕೆಕೆಸಿಸಿಐ ವಜ್ರ ಮಹೋತ್ಸವ: ವಿಶೇಷ ಅಂಚೆ ಲಕೋಟೆ ಬಿಡುಗಡೆ

KannadaprabhaNewsNetwork |  
Published : Sep 29, 2026, 01:30 AM IST
ಫೋಟೋ- ಪೋಸಟ್‌ ಸ್ಟಾಂಪ | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಆರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ ವಜ್ರ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಶೇಷ ಸ್ಮರಣಾರ್ಥ ಅಂಚೆ ಲಕೋಟೆಯನ್ನು ಕಲಬುರಗಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗಾಗಿ ಆರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ ವಜ್ರ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಶೇಷ ಸ್ಮರಣಾರ್ಥ ಅಂಚೆ ಲಕೋಟೆಯನ್ನು ಕಲಬುರಗಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ ವಿ. ಇಂಗಿನಶೆಟ್ಟಿ, ಉಪಾಧ್ಯಕ್ಷ ಕೇದಾರ ರಫೋಜಿ, ಪ್ರಭಾರಿ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ, ಅಂಚೆ ಅಧೀಕ್ಷಕ ರವೀಂದ್ರ ಬಿ.ಎಲ್. ಹಾಗೂ ಪ್ರಧಾನ ಅಂಚೆ ಕಚೇರಿಯ ಪೋಸ್ಟ್‌ಮಾಸ್ಟರ್ ಶ್ರೀಮತಿ ಇಂದುಮತಿ ಅವರು ವಿಶೇಷ ಸ್ಮರಣಾರ್ಥ ಅಂಚೆ ಲಕೋಟೆಯನ್ನು ಜಂಟಿಯಾಗಿ ಅನಾವರಣಗೊಳಿಸಿದರು. ವಿ.ಎಲ್. ಚಿತಕೋಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸದಸ್ಯರು ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

1966ರ ಜನವರಿ 17ರಂದು ಸ್ಥಾಪನೆಯಾದ ಕೆಕೆಸಿಸಿಐ, ಕಳೆದ 60 ವರ್ಷಗಳಿಂದ ಈ ಭಾಗದ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾ ಬಂದಿದೆ. ಕೈಗಾರಿಕಾ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ಧಿ, ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಉದ್ಯೋಗಾವಕಾಶಗಳ ವಿಸ್ತರಣೆಗೆ ನಿರಂತರವಾಗಿ ಶ್ರಮಿಸಿರುವ ಸಂಸ್ಥೆಯ ಸೇವಾ ಪಯಣವನ್ನು ಈ ವಿಶೇಷ ಅಂಚೆ ಲಕೋಟೆ ಸ್ಮರಣೀಯವಾಗಿಸಿದೆ.

ವಜ್ರ ಮಹೋತ್ಸವದ ಸ್ಮರಣಾರ್ಥ ಬಿಡುಗಡೆಯಾದ ಈ ವಿಶೇಷ ಅಂಚೆ ಲಕೋಟೆ ಕೆಕೆಸಿಸಿಐಯ ಮಹತ್ವದ ಮೈಲಿಗಲ್ಲನ್ನು ಸ್ಮರಿಸುವ ವಿಶಿಷ್ಟ ಸಂಕೇತವಾಗಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರ ದೂರದೃಷ್ಟಿ, ಸದಸ್ಯರ ಸಹಕಾರ ಹಾಗೂ ಈ ಭಾಗದ ವ್ಯಾಪಾರೋದ್ಯಮ ಸಮುದಾಯದ ಪರಿಶ್ರಮಕ್ಕೆ ಸಂದ ಗೌರವ ಇದಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಅಭಿಪ್ರಾಯಪಟ್ಟರು.

ಈ ವಿಶೇಷ ಅಂಚೆ ಲಕೋಟೆಯು ಕೇವಲ ಸ್ಮರಣಿಕೆಯಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಹೆಮ್ಮೆ, ಉದ್ಯಮಶೀಲತೆ ಮತ್ತು ಅಭಿವೃದ್ಧಿಯ ಆಶಯಗಳನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಆರು ದಶಕಗಳ ಸೇವೆಯನ್ನು ಅಂಚೆ ಇತಿಹಾಸದಲ್ಲಿ ದಾಖಲಿಸುವುದರೊಂದಿಗೆ, ಈ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದ ಪರಿಚಯವನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲು ನೆರವಾಗಲಿದೆ ಎಂದು ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ವಿ. ಇಂಗಿನಶೆಟ್ಟಿ ತಿಳಿಸಿದರು.

ಮುಂಬರುವ ಕೆಕೆಸಿಸಿಐ ವಜ್ರ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕ ಬಿಸಿನೆಸ್ ಮತ್ತು ಇಂಡಸ್ಟ್ರಿ ಎಕ್ಸ್ಪೋ 2026ರ ಹಿನ್ನೆಲೆಯಲ್ಲಿ ಈ ಲಕೋಟೆಯ ಬಿಡುಗಡೆ ವಿಶೇಷ ಮಹತ್ವ ಪಡೆದಿದೆ. ವಜ್ರ ಮಹೋತ್ಸವದ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಕೈಗಾರಿಕೆಗಳು ಮತ್ತು ಉತ್ಪನ್ನಗಳಿಗೆ ವಿಶಾಲ ವೇದಿಕೆ ಕಲ್ಪಿಸುವುದು, ಹೊಸ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಈ ಭಾಗದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಸಂಸ್ಥೆಯ ಉದ್ದೇಶವಾಗಿದೆ.

ಚಂದ್ರಕಾಂತ ಸಾವಳೋಟಗಿ ಸ್ವಾಗತಿಸಿ, ಅಶ್ವಿನಿ ನಿರೂಪಿಸಿ, ಚಂದ್ರಕಲಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಗಣೇಶ ಮೂರ್ತಿಗಳ ವಿಸರ್ಜನೆ
ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ