ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟ ಕೆಎಲ್‌ಇ ಆಸ್ಪತ್ರೆ

KannadaprabhaNewsNetwork |  
Published : Jul 23, 2025, 01:45 AM IST
ಕೆಎಲ್‌ಇ ಆಸ್ಪತ್ರೆಯವೈದ್ಯಕೀಯ ನಿರ್ದೇಶಕ ಡಾ. ಎಂ.ದಯಾನಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದು, ಡಿಜೆಟಲ್‌ಗೆ ರೂಪಾಂತರಗೊಂಡು ಸಂಪೂರ್ಣವಾಗಿ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದು, ಡಿಜೆಟಲ್‌ಗೆ ರೂಪಾಂತರಗೊಂಡು ಸಂಪೂರ್ಣವಾಗಿ ಕಾಗದ ರಹಿತ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಆಸ್ಪತ್ರೆಯು ಸದಾ ಒಂದು ಹೆಜ್ಜೆ ಮುಂದಿಟ್ಟಿದೆ. ಮುಂಬೈ ಮೂಲದ ಪ್ರೆಸ್ಕೊ ಪೇಪರ್‌ಲೆಸ್ ಸೊಲ್ಯೂಷನ್ಸ್ ಕಂಪನಿಯ ಸಹಕಾರದಿಂದ ರಾಜ್ಯದ ಪ್ರಥಮ ಸಂಪೂರ್ಣ ಕಾಗದರಹಿತ ಆಸ್ಪತ್ರೆಯಾಗಿದೆ ಎಂದರು.ಶಿಕ್ಷಣ, ಆರೋಗ್ಯ, ಕೃಷಿ, ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ಕೆಎಲ್‌ಇ ಸಂಸ್ಥೆಯು ಶತಮಾನವನ್ನು ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿರುವ ಆಸ್ಪತ್ರೆಯು 1200 ಹಾಸಿಗೆಗಳನ್ನು ಹೊಂದಿದ್ದು, ಸಂಪೂರ್ಣ ಕಾಗದರಹಿತವಾಗಿ ಆರೋಗ್ಯ ಸೇವೆ ನೀಡುವುದು ಅತ್ಯಂತ ಸಂಕೀರ್ಣ ಕಾರ್ಯ ಆದರೂ ಕೂಡ ಡಾ.ಪ್ರಭಾಕರ ಕೋರೆ ಹಾಗೂ ಅಮಿತ ಕೋರೆ ಅವರ ದೂರದೃಷ್ಟಿಯ ಫಲವಾಗಿ ಇದು ಸಾಧ್ಯವಾಗಿದೆ. ನಾವಿನ್ಯತೆ ಹಾಗೂ ರೋಗಿಗಳ ಆರೈಕೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗೆ ಸದಾ ಕಾರ್ಯಪ್ರವೃತ್ತವಾಗಿದೆ ಎಂದರು.ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ದೃಷ್ಟಿಯನ್ನಿಟ್ಟುಕೊಂಡು ಪರಿಸರ ರಕ್ಷಿಸುವ ಜವಬ್ದಾರಿಯೊಂದಿಗೆ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಕಾಗದರಹಿತ ಯೋಜನೆಯು ಪಾರದರ್ಶಕ ಹಾಗೂ ಸ್ಮಾರ್ಟ್‌ ಯೋಜನೆ ಹೊಂದಿದೆ. ಈ ಡಿಜಿಟಲ್ ರೂಪಾಂತರವು ರೋಗಿಗಳ ಆರೈಕೆಯಲ್ಲಿ ಶ್ರೇಷ್ಠತೆಯ ನಮ್ಮ ನಿರಂತರ ಅನ್ವೇಷಣೆಯ ಪ್ರತಿಬಿಂಬವಾಗಿದೆ. ಕಾಗದರಹಿತವಾಗಿ ಬದಲಾಗುವ ಮೂಲಕ, ನಾವು ಆಸ್ಪತ್ರೆಯ ಕಾರ್ಯಚಟುವಟಿಕೆಗಳಲ್ಲಿನ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದೇವೆ. ಈ ಕ್ರಮದಿಂದ ರೋಗಿಯ ಆರೈಕೆಯಲ್ಲಿಯೂ ಶೀಘ್ರವಾದ ನಿರ್ಧಾರ ತೆಗೆದುಕೊಳ್ಳುವಿಕೆಗೆ ಸಹಕಾರಿಯಾಗಲಿದೆ ಎಂದರು.

ಪ್ರತಿವರ್ಷ ಸುಮಾರು 50,000 ಕ್ಕೂ ಹೆಚ್ಚು ರೋಗಿಗಳ ದಾಖಲೆಗಳನ್ನು ನಿರ್ವಹಿಸುವ ಆಸ್ಪತ್ರೆಯು ಕಾಗದರಹಿತವಾಗಿ ಮಾರ್ಪಟ್ಟಿದ್ದು, 10 ರಿಂದ 12.5 ಮಿಲಿಯನ್ ಪುಟ ಕಾಗದಗಳಿಗಿಂತ ಅಧಿಕವಾಗಿ ಉಳಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಸರಿಸುಮಾರು 1,250 ರಿಂದ 1,500 ಮರಗಳನ್ನು ಸಂರಕ್ಷಿಸುವುದಕ್ಕೆ ಸಮನಾಗಿದ್ದು, ಪರಿಸರದ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಆಯುಷಮಾನ್‌ ಭಾರತ ಡಿಜಿಟಲ್ ಮಿಷನಗೆ ಕೆಎಲ್‌ಇ ಸಂಸ್ಥೆಯ ಪರಿವರ್ತಿತ ಮುಂದಡಿ ಆಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳು ಡಿಜಿಟಲ್ ರೂಪಾಂತರದತ್ತ ಸಾಗುವಂತೆ ಸಲಹೆ ನೀಡಲಾಗುತ್ತದೆ ಎಂದರು.ಈ ಯೋಜನೆಯಡಿಯಲ್ಲಿ ಆಸ್ಪತ್ರೆಯ ಎಲ್ಲ ವೈದ್ಯಕೀಯ, ಆಡಳಿತಾತ್ಮಕ ಕಾರ್ಯಚಟುವಟಿಕೆಯ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಆರೋಗ್ಯ ತಂತ್ರಜ್ಞಾನ ನಾವೀನ್ಯತೆ ಪ್ರಶಸ್ತಿ ವಿಜೇತ ತಂತ್ರಜ್ಞಾನದ ಪ್ರೆಸ್ಕೊ ಕಂಪನಿಯು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿದ್ಯುನ್ಮಾನವಾಗಿ ಪರಿವರ್ತಿಸಿದ್ದು, ಕಾಗದ ಆಧಾರಿತ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಆಡಳಿತಾತ್ಮಕ ಹೊರೆಗಳನ್ನು ಕಡಿಮೆ ಮಾಡಿದೆ. ಇದು ಸುಧಾರಿತ ದಕ್ಷತೆ, ವೆಚ್ಚ ಉಳಿತಾಯ ಮತ್ತು ನಿಖರವಾದ ಮಾಹಿತಿಗೆ ಅನುಕೂಲವಾಗಿದೆ. ಮುಖ್ಯವಾಗಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಅನುಗುಣವಾಗಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ಭಾರತೀಯ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆಯೊಂದಿಗೆ ಮಾಹಿತಿ ಗೌಪ್ಯತೆ ಮತ್ತು ಸೈಬರ್ ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಕಾಗದ ಕೊನೆಗೊಂಡು ಈ ಡಿಜಿಟಲ ರೂಪಾಂತರಕ್ಕೆ ಬದಲಾವಣೆಯಾಗಲು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಆಡಳಿತ ಮಂಡಳಿ, ಆಸ್ಪತ್ರೆಯ ಮಾಹಿತಿ ತಂತ್ರಜ್ಞಾನ( ಐಟಿ) ಮತ್ತು ಪ್ರೆಸ್ಕೊ ತಂಡದ ಸಹಯೋಗವು ಅತ್ಯಂತ ಪರಿಣಾಮಕಾರಿಯಾಗಿದ್ದು, ದೂರದೃಷ್ಟಿಯು ಕಾರ್ಯರೂಪಕ್ಕೀಳಿದಾಗ ಎಲ್ಲವೂ ಸಾಧ್ಯ ಎಂದರು.ನ್ಯೂರಾಲಬಿಟ್ಸ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ವಿಕ್ರಮ್ ತೊಟ್ರೆ ಮಾತನಾಡಿ, ವೈದ್ಯಕೀಯ ಶಿಕ್ಷಣ ಮತ್ತು ರೋಗಿಗಳ ಆರೈಕೆಯಲ್ಲಿ ನಾವಿನ್ಯತೆಯ ದಾರಿದೀಪವಾಗಿರುವ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದೊಂದಿಗೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಕಾಗದರಹಿತ ಪ್ರಯಾಣವು ಕೇವಲ ತಂತ್ರಜ್ಞಾನ ಕುರಿತಾಗಿಲ್ಲ. ಇದು ರೋಗಿಗಳ ಆರೈಕೆ, ಕಾರ‍್ಯಚಟುವಟಿಕೆ, ದಕ್ಷತೆ ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದೆ ಎಂದರು.ಮುಂಬರುವ ದಿನಗಳಲ್ಲಿ ಕೆಎಲ್‌ಇ ಸಂಸ್ಥೆಯು ತನ್ನೆಲ್ಲ ಆಸ್ಪತ್ರೆಗಳಲ್ಲಿ ಕಾಗದರಹಿತ ಕಾರ್ಯಚಟುವಟಿಕೆಯ ಯೋಜನೆಯನ್ನು ವಿಸ್ತರಿಸಲು ಯೋಜಿಸಿದೆ. ಇದರಿಂದ ತನ್ನೆಲ್ಲ ಆಸ್ಪತ್ರೆಗಳಲ್ಲಿ ಕಾಗದರಹಿತ ಕಾರ್ಯಚಟುವಟಿಕೆ ಯೋಜನೆ ಅಳವಡಿಸಿಕೊಂಡಿರುವ ಭಾರತದ ಪ್ರಥಮ ಸಂಸ್ಥೆಯಾಗಲಿದೆ. ಸುಮಾರು 4500ಕ್ಕೂ ಅಧಿಕ ಹಾಸಿಗೆಗಳ ಮೂಲಕ ಸ್ಮಾರ್ಟ್, ಸುಸ್ಥಿರ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಮುನ್ನಡೆಸಲಿವೆ ಎಂದರು.ಗೋಷ್ಠಿಯಲ್ಲಿ ಡಾ.ಮಾಧವ ಪ್ರಭು ಉಪಸ್ಥಿತರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ