ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರು ಪಡೆದಿರುವ ಇಲ್ಲಿನ ಕೆಎಂಸಿಆರ್‌ಐ (ಕರ್ನಾಟಕ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ)ಯ ನಿರ್ದೇಶಕರ ಸೇವಾವಧಿ ಈ ತಿಂಗಳಲ್ಲಿ ಕೊನೆಗೊಳ್ಳಲಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರು ಪಡೆದಿರುವ ಇಲ್ಲಿನ ಕೆಎಂಸಿಆರ್‌ಐ (ಕರ್ನಾಟಕ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ)ಯ ನಿರ್ದೇಶಕರ ಸೇವಾವಧಿ ಈ ತಿಂಗಳಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ನಿರ್ದೇಶಕ ಹುದ್ದೆಗಾಗಿ ಹಲವು ಹಿರಿಯ ವೈದ್ಯರು ಈಗಲೇ ಪೈಪೋಟಿಗಿಳಿದಿದ್ದಾರೆ. ಇವೆಲ್ಲದರ ನಡುವೆ ಈ ಸಲವೂ ಪೂರ್ಣಾವಧಿ ನಿರ್ದೇಶಕರ ನೇಮಕ ಮಾಡುವ ಸಾಧ್ಯತೆ ಕಡಿಮೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಬರೀ ಪ್ರಭಾರಿಗಳೆ:
ಕೊರೋನಾಕ್ಕಿಂತ ಮುಂಚೆ ಡಾ. ರಾಮಲಿಂಗಪ್ಪ ಅಂಟರತಾನಿ ಸರಿಸುಮಾರು 1 ವರ್ಷ ಪ್ರಭಾರಿ ನಿರ್ದೇಶಕರಾಗಿದ್ದರು. ಆಗಿನ ಕೆಲಸದ ಒತ್ತಡ ನೋಡಿಕೊಂಡು ಸರ್ಕಾರ ಅವರನ್ನೇ ಪೂರ್ಣಾವಧಿ ನಿರ್ದೇಶಕರನ್ನಾಗಿ ಮಾಡಿತ್ತು. ಅವರ ಅವಧಿ 2023ಕ್ಕೆ ಪೂರ್ಣಗೊಂಡಿತ್ತು. ಅದಾದ ಬಳಿಕ ಡಾ. ಎಸ್.ಎಫ್. ಕಮ್ಮಾರ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಿತ್ತು. ಇವರು ಒಂದೂವರೆ ವರ್ಷ ಪ್ರಭಾರಿ ನಿರ್ದೇಶಕರಾಗಿದ್ದರು.
ಸರ್ಜರಿ ವಿಭಾಗದ ಮುಖ್ಯಸ್ಥರು ಹಾಗೂ ಈಗ ಪ್ರಭಾರಿ ನಿರ್ದೇಶಕರಾಗಿರುವ ಡಾ. ಈಶ್ವರ ಹೊಸಮನಿ ಮೇ 30ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಇವರನ್ನು ಕಳೆದ 10 ತಿಂಗಳ ಹಿಂದೆಯಷ್ಟೇ ನಿರ್ದೇಶಕ ಸ್ಥಾನಕ್ಕೆ ಪ್ರಭಾರಿಗಳನ್ನಾಗಿ ಸರ್ಕಾರ ನಿಯುಕ್ತಿಗೊಳಿಸಿತ್ತು. ಕೆಎಂಸಿಯ ಹಳೆ ವಿದ್ಯಾರ್ಥಿಯೂ ಆಗಿರುವ ಡಾ. ಈಶ್ವರ, ತಮ್ಮ ನಿವೃತ್ತಿಯೊಳಗೆ ಒಮ್ಮೆ ನಿರ್ದೇಶಕರಾಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಆದಕಾರಣ ಒಂದು ಸಲ ಅವಕಾಶ ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದರು. ಅದರಂತೆ 2025ರ ಜುಲೈನಲ್ಲಿ ನಿರ್ದೇಶಕ ಹುದ್ದೆಗೆ ನಿಯೋಜಿಸಿತ್ತು. ಕಮ್ಮಾರ ಅವರನ್ನು ನಿರ್ದೇಶಕ ಹುದ್ದೆಯಿಂದ ಮುಕ್ತಗೊಳಿಸಿತ್ತು.
ಹೀಗಾಗಿ ಕಳೆದ 28 ತಿಂಗಳಿಂದ ಕೆಎಂಸಿಆರ್‌ಐನಲ್ಲಿ ಪ್ರಭಾರಿ ನಿರ್ದೇಶಕರೇ ಇದ್ದಾರೆ. ಆದರೆ, ಈ ಸಲವೂ ಪೂರ್ಣಾವಧಿ ನಿರ್ದೇಶಕರ ನೇಮಕ ಆಗುವುದು ಕಷ್ಟ. ಸದ್ಯಕ್ಕೆ ಪ್ರಭಾರಿ ನಿರ್ದೇಶಕರ ನೇಮಕ ಮಾಡಿ ನಂತರ ಪೂರ್ಣಾವಧಿ ಮಾಡುವ ಸಾಧ್ಯತೆ ಹೆಚ್ಚು. ಏಕೆಂದರೆ ಪೂರ್ಣಾವಧಿ ನಿರ್ದೇಶಕರ ನೇಮಕ ಮಾಡಬೇಕೆಂದರೆ ಮೊದಲಿಗೆ ನೋಟಿಫಿಕೇಶನ್ ಹೊರಡಿಸಿ ಅರ್ಜಿ ಆಹ್ವಾನಿಸಬೇಕು. ಬಳಿಕ ಸಿನಿಯಾರಿಟಿ, ಅನುಭವ ಹೀಗೆ ಪ್ರತಿಯೊಂದನ್ನು ಅಳೆದು-ತೂಗಿ ನೇಮಕ ಮಾಡಬೇಕಾಗುತ್ತದೆ. ಆದರೆ, ಈಗಿರುವ ಪ್ರಭಾರಿ ನಿರ್ದೇಶಕರ ನಿವೃತ್ತಿಗೆ ಇನ್ನೊಂದು ವಾರವಷ್ಟೇ ಉಳಿದಿರುವುದರಿಂದ ಈ ಎಲ್ಲ ಪ್ರಕ್ರಿಯೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಈ ಸಲವೂ ಪ್ರಭಾರಿ ನಿರ್ದೇಶಕರ ನೇಮಕ ಆಗುವ ಸಾಧ್ಯತೆಯೇ ಹೆಚ್ಚು. ಆದರೂ ಸರ್ಕಾರ ಮನಸು ಮಾಡಿ ಸಿನಿಯಾರಿಟಿಯ ಮೇಲೆಯೇ ಪೂರ್ಣಾವಧಿ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬುದು ಹಿರಿಯ ವೈದ್ಯರ ಅಂಬೋಣ. ಯಾವುದಕ್ಕೂ ಇಲಾಖೆ ಸಚಿವರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬನೆಯಾಗಿದೆ. ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ರೇಸ್‌ನಲ್ಲಿ ಯಾರ್‍ಯಾರು?
ಇನ್ನೊಂದು ವಾರದಲ್ಲಿ ತೆರವಾಗಲಿರುವ ನಿರ್ದೇಶಕರ ಹುದ್ದೆಗೆ ಹಿಂದೆ ಕೆಎಂಸಿಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಪ್ರಸ್ತುತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಪ್ರಭಾರ ನಿರ್ದೇಶಕರಾಗಿರುವ ಡಾ. ಅರುಣಕುಮಾರ ಚವ್ಹಾಣ, ಕೆಎಂಸಿ ಹಿಂದಿನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ನಡುವೆ ಪ್ರಬಲ ಪೈಪೋಟಿ ನಡೆದಿದೆ. ಇನ್ನೊಂದೆಡೆ ಮಹಿಳಾ ಕೋಟಾದಡಿ ತಮಗೆ ಕೊಡಿ ಎಂದು ಫಾರ್ಮಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಜಾನಕಿ ತೊರವಿ ಅವರು ಪ್ರಯತ್ನದಲ್ಲಿದ್ದಾರೆ. ಮತ್ತೊಂದೆಡೆ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಎಲುವು -ಕೀಲು ವಿಭಾಗದ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಕಲ್ಲೂರಾಯ ಅವರ ಹೆಸರು ಕೇಳಿ ಬರುತ್ತಿದೆ. ಅರುಣಕುಮಾರ ಅವರು ಮುಂದಿನ ಏಪ್ರಿಲ್‌ಗೆ ನಿವೃತ್ತಿಯಾಗಲಿದ್ದಾರೆ. ಇದೇ ತಮಗೆ ಕೊನೆಯ ಅವಕಾಶ. ಹೀಗಾಗಿ ತಮಗೆ ನಿರ್ದೇಶಕರನ್ನಾಗಿ ಮಾಡಬೇಕು. ಜತೆಗೆ ಡಿಮ್ಹಾನ್ಸ್ ನಿರ್ದೇಶಕ ಹುದ್ದೆ, ಕೆಎಂಸಿ ಅಧೀಕ್ಷಕ ಹುದ್ದೆಯ ಅನುಭವ ಇರುವುದರಿಂದ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇನ್ನೊಂದೆಡೆ, ಈಗಾಗಲೇ ಪ್ರಭಾರಿ ನಿರ್ದೇಶಕ ಹುದ್ದೆಯ ಅನುಭವ ಮತ್ತು ಸಿನಿಯಾರಿಟಿಯ ಅರ್ಹತೆಯೂ ಇದೆ. ಹಾಗಾಗಿ ಪೂರ್ಣಾವಧಿಗೆ ಅವಕಾಶ ಕೊಡಬೇಕೆಂದು ಡಾ. ಎಸ್.ಎಫ್. ಕಮಾರ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.