ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಂ ಮಾತನಾಡಿ, ಜಿಲ್ಲೆಯ ಸಂಘವು ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಅವಕಾಶ ವಂಚಿತರಿಗೆ ಅವಕಾಶ ಕೊಟ್ಟು, ಸೇವಾ ಹಿರಿತನ, ನಿಷ್ಠೆ, ಬದ್ಧತೆ ಸ್ಮರಿಸಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಸಂಘದ ಒಮ್ಮತದ ಮನೋಭಾವನೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಂಜುನಾಥ್ ಅವರಿಗೂ ರಾಜ್ಯ ಸಂಘದ ಸದಸ್ಯರನ್ನಾಗಿ ಆಯ್ಕೆಯಾಗುವ ಅವಕಾಶ ಕಲ್ಪಿಸಲಾಗಿದೆ. ನೂತನ ಅಧ್ಯಕ್ಷರು ಸಂಘದ ಏಳ್ಗೆಗೆ ಶ್ರಮಿಸಲಿ. ಸಂಘದ ಕಾರ್ಯಕಾರಿ ಮಂಡಳಿ ಸದಾ ಸಹಕಾರವಾಗಿ ನಿಲ್ಲಲಿ ಎಂದು ಆಶಿಸಿದರು.ಮತ್ತೋರ್ವ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಸಂಘದ ಆಗಬೇಕಾದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ. ನೂತನ ಅಧ್ಯಕ್ಷ ಹಿರಿಯ ಹಾಗೂ ಕಿರಿಯ ಪತ್ರಕರ್ತರನ್ನು ವಿಶ್ವಾಸಕ್ಕೆ ಪಡೆದು ಸಂಘವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಿವಿಮಾತು ಹೇಳಿದರು.
ಹಾಲಿ ಆಡಳಿತ ಮಂಡಳಿಯಲ್ಲಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷನಾಗಿ ಈಗ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ನೀಡಿದ ಹಿರಿಯರನ್ನು ನೆನೆದು ಸಂಘವನ್ನು ಒಗ್ಗೂಡಿಸಿ ಕೊಂಡೊಯ್ಯುವ ಜಯರಾಂ ಅವರ ಶಕ್ತಿಯನ್ನು ಮರೆಯುವಂತಿಲ್ಲ ಎಂದರು.
ಈ ವೇಳೆ ನಿಕಟ ಪೂರ್ವ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷರಾದ ಗಣಂಗೂರು ನಂಜೇಗೌಡ, ರವಿ ಸಾವಂದಿಪುರ, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಖಜಾಂಚಿ ನಂಜುಂಡಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಜಿಗುಂಡಿಪಟ್ಟಣ ಬಾಲು, ಕಾರ್ಯದರ್ಶಿಗಳಾದ ಮಂಜುಳ ಕಿರುಗಾವಲು, ಬಿ.ಎಸ್.ಜಯರಾಂ, ಚಿನಕುರಳಿ ಲೋಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ತಾಲೂಕುಗಳ ಪತ್ರಕರ್ತರು ಇದ್ದರು.