ಕನ್ನಡಪ್ರಭ ವಾರ್ತೆ ಬೆಳಗಾವಿ
ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ, ದರ್ಶನ್ ಪಾಟೀಲ ಮತ್ತು ಸತೀಶ ಪೂಜಾರಿ ಚಾಕು ಇರಿತದಿಂದ ಗಾಯಗೊಂಡವರು. ಚಿಕಿತ್ಸೆಗಾಗಿ ಈ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆದಿತ್ತು. ಅಪರಿಚಿತರ ಗುಂಪು ಸಣ್ಣ ಪುಟ್ಟ ವಿಚಾರವಾಗಿ ಯುವಕರ ಜೊತೆಗೆ ಜಗಳ ತೆಗೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ಅಲ್ಲಿಂದ ಚದುರಿಸಿದರು.ಆದರೆ, ಚನ್ನಮ್ಮ ವೃತ್ತದಲ್ಲಿ ಚಲನಚಿತ್ರ ಗೀತೆಗಳ ತಕ್ಕಂತೆ ಯುವಕರು ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲೇ ಅಪರಿಚಿತ ಗುಂಪು ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಯುವಕರ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಚಾಕುವಿನಿಂದ ಇರಿದು ಬೈಕ್ ಮೇಲೆ ಪರಾರಿಯಾಗುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚರ್ಚ್ ಗಲ್ಲಿಯ ಯುವಕರ ಗ್ಯಾಂಗ್ ಈ ಕೃತ್ಯ ಎಸಗಿದ್ದು, ವೈಯಕ್ತಿಕ ಕಾರಣದಿಂದ ಕೃತ್ಯ ನಡೆದಿದೆ. ಇವರೆಲ್ಲರೂ ಗಾಂಜಾ ಮತ್ತಿನಲ್ಲಿ ಚಾಕು ಇರಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗಂಭೀರ ಗಾಯಗೊಂಡಿರುವ ಗುಂಡ್ಯಾಗೋಳನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕುವಿನಿಂದ ದಾಳಿ ಮಾಡಿದ ಘಟನೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನಗರದಲ್ಲಿ ಉದ್ನಿಗ್ವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಪೊಲೀಸರು ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗ ಬದಲಿಸಿರುವುದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು. ಚವ್ಹಾಟ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ತಡೆದರು. ಗಣೇಶ ಮೂರ್ತಿಯನ್ನು ಸ್ಥಳದಲ್ಲೇ ಬಿಟ್ಟು ಹೊರಟುಹೋದರು. ಪೊಲೀಸರ ಕ್ರಮ ಖಂಡಿಸಿ ಗಣೇಶ ಮಂಡಳಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಪ್ರತಿವರ್ಷ ಸಾಗುವ ಮಾರ್ಗದಲ್ಲೇ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರ ಭದ್ರತೆಯಲ್ಲಿ ಕಚೇರಿ ಗಲ್ಲಿ ಮಾರ್ಗವಾಗಿ ಕಪಿಲೇಶ್ವರ ರಸ್ತೆಗೆ ತೆರಳಿತು.ಮತ್ತೊಂದು ಚಾಕು ಇರಿದಲ್ಲಿ ಓರ್ವ ಗಾಯ
ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಮತ್ತೊಂದು ಚಾಕು ಇರಿದ ಘಟನೆ ಕೋನ್ವಾಳ ಗಲ್ಲಿಯಲ್ಲಿ ನಡೆದಿದೆ. ಬೆಳಗಾವಿ ಮುಜಾವರ ಗಲ್ಲಿಯ ವಿವೇಕಾನಂದ ವಕ್ಕವ್ವಗೋಳ (20) ಚಾಕು ಇರಿತಕ್ಕೆ ಒಳಗಾದವರು. ಹೊಟ್ಟೆಯ ಎಡಭಾಗಕ್ಕೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಗಾಯಾಳು ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತರು ಚಾಕು ಇರಿದು ಪರಾರಿಯಾಗಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಚೂರಿ ಇರಿತ ಪ್ರಕರಣಕ್ಕೂ ಗಣೇಶೋತ್ಸವಕ್ಕೂ ಸಂಬಂಧ ಇಲ್ಲ: ಸಚಿವ ಜಾರಕಿಹೊಳಿ