ಹುಬ್ಬಳ್ಳಿ:
ಆದಾಯ ತೆರಿಗೆ ಇಲಾಖೆ ನಿಯಮಗಳನ್ನು ಅರಿತು ನಡೆದರೆ ಉದ್ದಿಮೆ, ವ್ಯಾಪಾರದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಅರುಣಕುಮಾರ ಕರೆ ನೀಡಿದರು.ಅವರು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಿದ್ದ ಆದಾಯ ತೆರಿಗೆ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಯ್ದೆಗಳು ಮತ್ತಷ್ಟು ಕಠಿಣವಾಗಿವೆ. ವಾಣಿಜ್ಯೋದ್ಯಮಿಗಳು ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮುಂಗಡವಾಗಿ ಪಾವತಿಸಬೇಕು ಎಂದರು.ಲೆಕ್ಕಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರ ಸೇವೆಯು ಆದಾಯ ತೆರಿಗೆ ಇಲಾಖೆಗೆ ಸಾಕಷ್ಟು ನೆರವಾಗಿದೆ. ತಮ್ಮ ಗ್ರಾಹಕರು ಅಥವಾ ಉದ್ಯಮಿಗಳಿಗೆ ಆದಾಯ ತೆರಿಗೆಯನ್ನು ಮುಂಗಡವಾಗಿ ಪಾವತಿಸುವಂತೆ ತಿಳಿಸಬೇಕು. ತಡವಾಗಿ ಪಾವತಿಸಿದರೆ ಮುಂದಾಗುವ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆಗ ಮಾತ್ರ ಅದರ ಪರಿಣಾಮ ಅರಿತು ಸಕಾಲದಲ್ಲಿ ಆದಾಯ ತೆರಿಗೆ ಪಾವತಿಗೆ ಮುಂದಾಗುತ್ತಾರೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಉದ್ಯಮಿಗಳು ಆರ್ಥಿಕ ವರ್ಷ ಮುಗಿದ ಮೇಲೆ ಆದಾಯ ತೆರಿಗೆ ಪಾವತಿಸುವ ಪ್ರವೃತ್ತಿ ಹೊಂದಿದ್ದು ಇದನ್ನು ಕೈಬಿಟ್ಟು ಇಲಾಖೆಯ ನಿಯಮದಂತೆ ಮುಂಗಡವಾಗಿ ಪಾವತಿಸಬೇಕೆಂದು ಕರೆ ನೀಡಿದರು
ಕಳೆದ ವರ್ಷದ ಆರ್ಥಿಕ ವರ್ಷದಲ್ಲಿ 13 ಜಿಲ್ಲೆಯ ವ್ಯಾಪ್ತಿಯ ಕಚೇರಿಗೆ ₹1049 ಕೋಟಿ ಆದಾಯ ತೆರಿಗೆ ಗುರಿ ಹೊಂದಿತ್ತು. ಪ್ರಸಕ್ತ ಸಾಲಿನಲ್ಲಿ ನೀಡಿದ್ದ ₹2000 ಕೋಟಿ ಗುರಿಯಲ್ಲಿ ಶೇ. 60 ಸಾಧನೆ ಮಾಡಲಾಗಿದೆ. 2023-24ನೇ ಸಾಲಿನ ಹಣಕಾಸು ವರ್ಷಕ್ಕೆ ಉದ್ಯಮಿಗಳು ಮುಂಗಡವಾಗಿ ತೆರಿಗೆ ಪಾವತಿಸುವಂತೆ ತಿಳಿಸಿದರು.ಆದಾಯ ತೆರಿಗೆ ಉಪ ಆಯುಕ್ತ(ಟಿಡಿಎಸ್) ಕೀರ್ತಿ ನಾಯಕ ಮಾತನಾಡಿ, ಉದ್ಯಮ, ವ್ಯಾಪಾರ ಆರಂಭಿಸುವ ಮುನ್ನ ಆದಾಯ ತೆರಿಗೆ ಪಾವತಿ ಬಗ್ಗೆ ತಿಳಿದುಕೊಳ್ಳಬೇಕು. ಟಿಡಿಎಸ್ ಕಡಿತಕ್ಕೆ ಒಳ ಪಡುತ್ತೇವೆಯೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಇದೊಂದು ಸಣ್ಣ ವಿಷಯ ಎನಿಸಿದರೂ ಮುಂದೆ ದೊಡ್ಡ ಸಮಸ್ಯೆ ಅನುಭವಿಸಬೇಕಾಗುತ್ತದೆ. ಇ-ಕಾಮರ್ಸ್‌ಗಳಲ್ಲಿ ₹೫ ಲಕ್ಷ ಕ್ರಿಪ್ಟೋ ಕರೆನ್ಸಿಯಲ್ಲಿ ₹50 ಸಾವಿರ ಮೇಲ್ಪಟ್ಟು ವ್ಯವಹಾರ ನಡೆಸುವವರು ಟಿಡಿಎಸ್ ಕಡಿತಕ್ಕೆ ಒಳಗಾಗಬೇಕಾಗುತ್ತದೆ ಎಂದರು.
ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೇಶವ ದೀಕ್ಷಿತ್, ರವೀಂದ್ರ ಹತ್ತಳ್ಳಿ, ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಧರ್ಮರಾಜ ಖೋಡೆ, ರಾಜೇಶ ಪಾಲೇಕರ, ನಾಗರಾಜ ರಾಜಕುಮಾರ ಕರಣಿ, ಸಂಸ್ಥೆಯ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ರಮೇಶ ಪಾಟೀಲ, ತೆರಿಗೆ ಸಮಿತಿ ಚೇರಮನ್ ಕಾರ್ತಿಕ ಶೆಟ್ಟಿ, ಶೇಷಗಿರಿ ಕುಲಕರ್ಣಿ, ಸಮೀರ ಓಸ್ತವಾಲ ಸೇರಿದಂತೆ ಹಲವರಿದ್ದರು.