ಯಲ್ಲಾಪುರ: ಪರಿಪೂರ್ಣ ಜ್ಞಾನ ಲಭಿಸುವುದು ಗ್ರಂಥಾಲಯಗಳಿಂದ ಹೊರತು ತಂತ್ರಜ್ಞಾನದಿಂದಲ್ಲ. ತಾಂತ್ರಿಕತೆಯತ್ತ ಮುನ್ನುಗ್ಗುತ್ತಿರುವ ಜಗತ್ತು ಎಷ್ಟೇ ಮುಂದುವರಿದರೂ ಪರಿಪೂರ್ಣ ಜ್ಞಾನ ಸಂಪಾದಿಸಲು ಗ್ರಂಥಾಲಯವೇ ಅವಶ್ಯಕ ಎಂದು ಕಿರವತ್ತಿಯ ಸ.ಪ್ರೌ. ಶಾಲಾ ಮುಖ್ಯಾಧ್ಯಾಪಕ ಜನಾರ್ದನ ಗಾಂವ್ಕರ್ ತಿಳಿಸಿದರು.ಡಿ. ೧೯ರಂದು ಪಟ್ಟಣದ ವಿಶ್ವದರ್ಶನ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಇಂದಿನ ಯುಗದಲ್ಲಿ ತಾಂತ್ರಿಕತೆಗೆ ಹಾಗೂ ಕ್ರಿಯಾತ್ಮಕತೆಗೆ ಒತ್ತು ನೀಡಲಾಗುತ್ತಿದೆ. ನಮ್ಮ ಯಶಸ್ಸು ವೈಯಕ್ತಿಕವಾಗಿರದೇ ಸಮಾಜಕ್ಕೆ ಉಪಯುಕ್ತವೆನಿಸುವಂತಿರಬೇಕು. ಶೈಕ್ಷಣಿಕ ಸಂಸ್ಥೆಗಳು ಇಂತಹ ಧ್ಯೇಯೋದ್ದೇಶವನ್ನು ಹೊಂದಿರುತ್ತವೆ. ವಿದ್ಯಾರ್ಥಿಗಳು ಇಂತಹ ಉದ್ದೇಶವನ್ನು ಸ್ವೀಕರಿಸುವ ಮನೋಭಾವ ಹೊಂದಿದ್ದರೆ ಸುಲಭವಾಗಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಸಮಾಜ, ದೇಶಕ್ಕೂ ಹೊರೆಯಾಗದಂತೆ ಬದುಕಬೇಕು ಎಂದರು.ಪಟ್ಟಣದ ಮೊರಾರ್ಜಿ ಪ್ರೌಢಶಾಲೆಯ ಪ್ರಾಂಶುಪಾಲ ಸಂಜಯ್ ನಾಯ್ಕ ಮಾತನಾಡಿ, ಈ ಹಿಂದೆ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಖರ್ಚಿನೊಂದಿಗೆ ಮನೆಯಿಂದ ದೂರದೂರಿಗೆ ಪ್ರಯಾಣಿಸಬೇಕಾದ ಸನ್ನಿವೇಶ ಎದುರಾಗುತ್ತಿತ್ತು. ಆದರೆ ವಿಶ್ವದರ್ಶನ ಸಂಸ್ಥೆ ಇಂತಹ ಸಮಸ್ಯೆ ತಪ್ಪಿಸಲು ತಾಲೂಕಿನಲ್ಲಿಯೇ ಮಕ್ಕಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ಒದಗಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಅಜಯ ಭಾರತೀಯ ಮಾತನಾಡಿ, ನಮ್ಮ ಸಂಸ್ಥೆ ಪ್ರತಿವರ್ಷ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದರು. ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪಪೂ ಕಾಲೇಜು ಪ್ರಾಂಶುಪಾಲ ದತ್ತಾತ್ರೇಯ ಗಾಂವ್ಕರ್, ವಿಶ್ವದರ್ಶನ ಕೇಂದ್ರಿಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಹಾಗೂ ಪದವಿಪೂರ್ವ ಕಾಲೇಜಿನ ಶಿಕ್ಷಕರು ಉಪಸ್ಥಿತರಿದ್ದರು. ಉಪಪ್ರಾಚಾರ್ಯ ವಿನಾಯಕ್ ಭಟ್ಟ ವರದಿ ವಾಚಿಸಿದರು. ರಮೇಶ್ ನಾಯಕ್ ಹಾಗೂ ಗುರುರಾಜ್ ಭಟ್ಟ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ವಾಗೀಶ್ ಭಟ್ಟ ಪ್ರಾರ್ಥಿಸಿದರು. ನಾಗರಾಜ್ ಹೆಗಡೆ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ನೋಡಿಕೊಂಡರು. ಉಪನ್ಯಾಸಕ ಸಚಿನ್ ಭಟ್ಟ ನಿರ್ವಹಿಸಿದರು. ಹಿಂದಿ ಭಾಷಾ ಉಪನ್ಯಾಸಕ ಜಗನ್ನಾಥ ಬಸೂತ್ಕರ ವಂದಿಸಿದರು.ಇಂದು ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಾಪುರ: ತಾಲೂಕು ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಂವಾದ ಸಭೆ ಡಿ. ೨೧ರಂದು ಯಲ್ಲಾಪುರ ಉಪವಿಭಾಗದ ಆವರಣದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು, ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.