
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜ್ಞಾನಯೋಗಾಶ್ರಮದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಯವರ 3ನೇ ಪುಣ್ಯಸ್ಮರಣೋತ್ಸವ ಗುರುನಮನ ನಿಮಿತ್ತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಿಯಮಿತ ವ್ಯಾಯಾಮ, ಅಧ್ಯಾತ್ಮ, ಸತ್ವಯುತ ಸಾವಯವ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಜ್ಞಾನ ದಾಸೋಹದ ಪ್ರವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.ಶಿಬಿರದ ಸಂಚಾಲಕ ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಪ್ರತಿವರ್ಷ ಗುರುಪೂರ್ಣಿಮೆ ದಿನದಂದು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತದೆ. ಈಗ ಶ್ರೀಗಳ ಗುರುನಮನ ಅಂಗವಾಗಿ ಆಯೋಜಿಸಿರುವ ಎರಡು ದಿನಗಳ ಶಿಬಿರದ ಲಾಭ ಪಡೆಯಬೇಕು. ಈ ಶಿಬಿರದಲ್ಲಿ ತಜ್ಞವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದು, ರಕ್ತ ಮತ್ತು ಇಸಿಜಿ ತಪಾಸಣೆ ಮಾಡಲಾಗುವುದು. ಉಚಿತವಾಗಿ ಔಷಧಿ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಇರುವ ಪ್ರಕರಣಗಳಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥ ಡಾ.ಸತೀಶ ಅರಕೇರಿ, ಡಾ.ಭಾಗ್ಯಶಾಲಿ, ಡಾವೆಂಕಟೇಶ ಚವ್ಹಾಣ, ಡಾ.ಪ್ರಶಾಂತ ವಾಜಂತ್ರಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಕಿರಣ, ಡಾ.ಗೌರವ, ಡಾ.ವಿಶಾಲ, ಸಹಾಯಕ ಸಿಬ್ಬಂದಿ ಶ್ರೀಶೈಲ ಕುಂಬಾರ, ಸಾವಿತ್ರಿ ಜಂಗಮಶೆಟ್ಟಿ, ಶಶಿಕಾಂತ ಕೋಳಿ, ಅವಿನಾಶ ಮದಭಾವಿ, ದತ್ತಾತ್ರೇಯ, ಸುಹಾಸ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಜ್ಞಾನಯೋಗಾಶ್ರಮದ ಭಕ್ತಮಂಡಳಿಯ ಎಂ.ಜಿ.ಹಳ್ಳದ, ರವೀಂದ್ರ ಬಿಜ್ಜರಗಿ, ಆರ್.ಎನ್. ಪಟ್ಟಣಶೆಟ್ಟಿ, ಪ್ರಕಾಶ ಹಿಟ್ನಳ್ಳಿ, ಉಮೇಶ ಶಿವಯೋಗಿಮಠ, ಶಂಕರ ಕವಿಶೆಟ್ಟಿ ಇತರರು ಉಪಸ್ಥಿತರಿದ್ದರು.