ಕಸಾಪದಿಂದ ಕನ್ನಡ ನಾಡು ನುಡಿಯ ಬಗ್ಗೆ ಅರಿವು

KannadaprabhaNewsNetwork |  
Published : Aug 05, 2024, 12:33 AM IST
ಮುಂಡರಗಿ ತಾಲೂಕಿನ ಡಂಬಳ ಜೆ.ಟಿ.ಪಿಯುಸಿ ಕಾಲೇಜು, ಹಾಗೂ ಜೆ.ಟಿ. ಬಾಲಕರ, ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ಈಚಗೆ ಕಸಾಪ ಆಶ್ರಯದಲ್ಲಿ ಜರುಗಿದ ಆಲೂರು ವೆಂಕಟರಾಯರ ಜೀವನ ಸಾಧನೆ ಕಾರ್ಯಕ್ರಮವನ್ನು ಗೋಣಿಬಸಪ್ಪ ಕೊರ್ಲಹಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು

ಮುಂಡರಗಿ: ಹುಯಿಲಗೋಳ ನಾರಾಯಣರು ಸೇರಿದಂತೆ ಗದಗ ಜಿಲ್ಲೆಯ ಅನೇಕ ಮಹನೀಯರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ, ಗದುಗಿನ ಕುಮಾರವ್ಯಾಸ ಸಾಹಿತ್ಯ ದೇಶದಲ್ಲಿಯೇ ಮನೆ ಮಾಡಿದೆ. ಕಸಾಪ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಡಂಬಳದ ಸಾಮಾಜಿಕ ಕಾರ್ಯಕರ್ತ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ಡಂಬಳ ಜೆ.ಟಿ. ಬಾಲಕರ ಮತ್ತು ಜೆ.ಟಿ. ಬಾಲಕಿಯರ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಆಲೂರು ವೆಂಕಟರಾಯರ ಜೀವನ ಸಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಸಾಪ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಜಾನಪದ ಕಲೆ ಇತರ ಹಲವಾರು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಕೂಡಾ ಅನೇಕ ಸಾಹಿತಿಗಳ ಪರಿಚಯ ಮತ್ತು ನಾಡು ನುಡಿಗಾಗಿ, ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸುವ ಕಾರ್ಯ ನಡೆದಿದೆ. ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

ಹೂವಿನ ಹಡಗಲಿ ಜಿಬಿಆರ್ ಕಾಲೇಜಿನ ಪ್ರೊ. ಪ್ರಭು ಸೊಪ್ಪಿನ ಮಾತನಾಡಿ, ಆಲೂರು ವೆಂಕಟರಾಯರು, ಬರಹಗಾರರಾಗಿ, ಲೇಖಕರಾಗಿ ಮತ್ತು ವಿಶೇಷವಾಗಿ ಕರ್ನಾಟಕದ ಏಕೀಕರಣದ ಪಿತಾಮಹರಾಗಿ ಕನ್ನಡ ಕುಲಪುರೋಹಿತ ಎಂದು ಕರೆಸಿಕೊಂಡರು. ಗದಗ ಜಿಲ್ಲೆಯಲ್ಲಿ ಓದಿ ಕರ್ನಾಟಕದ ಇತಿಹಾಸ ಪುಟಗಳನ್ನು ಕರ್ನಾಟಕ ಏಕೀಕರಣವಾಗಲು ರಾಜ್ಯದ ಹಲವಾರು ಸಾಹಿತಿಗಳನ್ನು ಬರಹಗಾರರನ್ನು ಒಂದು ಕಡೆಗೆ ಸೇರಿಸಿ ಒಂದೇ ಗ್ರಾಂಥಿಕ ಭಾಷೆಯಲ್ಲಿ ಲೇಖನ ಬರೆಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಬದುಕು ಮತ್ತು ಬರಹ ಒಂದೇ ರೀತಿಯಲ್ಲಿರಿಸಿಕೊಂಡು ಜೀವನ ಸಾಗಿಸಿದ ವೆಂಕಟರಾಯರು ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿದ ಮೇಲೆ ಅದರ ಪ್ರಭಾವ ಬೀರಿಸಿಕೊಂಡು ರಾಜ್ಯದಲ್ಲಿ ಆಳಿ ಹೋದ ಅನೇಕ ರಾಜಮಹಾರಾಜರ ಜೀವನ ಚರಿತ್ರೆ ದಾಖಲಿಸಿದರು. ಅಂತವರ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಅಧ್ಯಯನ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಜೆ.ಟಿ. ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯ ಶಂಕರ ಕಲ್ಲಿಗನೂರ, ಸಂಜೋತಾ ಸಂಕಣ್ಣವರ, ಲಿಂಗರಾಜ ದಾವಣಗೆರೆ, ಕೃಷ್ಣಮೂರ್ತಿ ಸಾಹುಕಾರ, ಮಂಜುನಾಥ ಮುಧೋಳ, ವಿಜಯ ಹಿರೇಮಠ, ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿ.ಕೆ. ಗಣಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ತಳವಾರ ಸ್ವಾಗತಿಸಿದರು. ಎ.ಬಿ. ಬೇವಿನಕಟ್ಟಿ ನಿರೂಪಿಸಿ, ಎ.ಬಿ. ಹಿರೇಮಠ ವಂದಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ