ಕಾರ್ಮಿಕರಿಗೆ ಕಾನೂನಿನ ಅರಿವು ಅಗತ್ಯ: ನ್ಯಾ. ಸುನಿಲ್ ಹೊಸಮನಿ

KannadaprabhaNewsNetwork |  
Published : May 02, 2024, 12:15 AM IST
೧ಕೆಎಲ್‌ಆರ್-೮ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ವೇಮಗಲ್‌ನ ಕೈಗಾರಿಕಾ ಪ್ರದೇಶದ ಸಾಯಿ ಆಶ್ರಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ  ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು  ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ್ ಎಸ್.ಹೊಸಮನಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯಗಳು ಸಿಗುತ್ತಿವೆ, ಉಚಿತ ಆರೋಗ್ಯ ಸೇವೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಟ್ಟಡ ನಿರ್ಮಾಣ ಸಲಕರಣೆ ಖರೀದಿಗೆ ನೆರವು ಇವುಗಳ ಕುರಿತು ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿ, ಕಾರ್ಮಿಕರ ಕಲ್ಯಾಣ ನಿಧಿಯ ಹಣ ಕಾರ್ಮಿಕರ ಅಭ್ಯೂದಯಕ್ಕೆ ಬಳಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಕಾರ್ಮಿಕರಿಗೆ ಸರ್ಕಾರದಿಂದ ನಿಯಮಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾರ್ಮಿಕ ಇಲಾಖೆ ಪ್ರಮುಖ ಪಾತ್ರವಹಿಸಬೇಕು ಮತ್ತು ತಮ್ಮ ಹಕ್ಕುಗಳನ್ನು ಪಡೆಯಲು ಅನುಕೂಲವಾಗುವಂತೆ ಕಾನೂನಿನ ಅರಿವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ತಾಲೂಕಿನ ವೇಮಗಲ್‌ನ ಕೈಗಾರಿಕಾ ಪ್ರದೇಶದ ಸಾಯಿ ಆಶ್ರಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯಗಳು ಸಿಗುತ್ತಿವೆ, ಉಚಿತ ಆರೋಗ್ಯ ಸೇವೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಟ್ಟಡ ನಿರ್ಮಾಣ ಸಲಕರಣೆ ಖರೀದಿಗೆ ನೆರವು ಇವುಗಳ ಕುರಿತು ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿ, ಕಾರ್ಮಿಕರ ಕಲ್ಯಾಣ ನಿಧಿಯ ಹಣ ಕಾರ್ಮಿಕರ ಅಭ್ಯೂದಯಕ್ಕೆ ಬಳಕೆಯಾಗಬೇಕು ಎಂದರು.

ಬಾಲ್ಯವಿವಾಹ, ಬಾಲ ಕಾರ್ಮಿಕತೆ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುದನ್ನು ತಪ್ಪಿಸುವಲ್ಲಿ ಸಮುದಾಯ, ಕಾರ್ಮಿಕರು ಮತ್ತು ಸಮುದಾಯ ಸಹಕಾರ ನೀಡಬೇಕು, ಹೆಚ್ಚು ಪ್ರಚಾರ ಒದಗಿಸುವ ಮೂಲಕ ಪೋಷಕರಿಗೆ ಈ ಕುರಿತು ಮಾರ್ಗದರ್ಶನ ನೀಡಬೇಕು ಎಂದರು.

ಓದುವ ವಯಸ್ಸಿನಲ್ಲಿ ಮಕ್ಕಳನ್ನು ಉದ್ಯೋಗ, ಗ್ಯಾರೇಜ್, ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವ ಕಾರ್ಯ ಗಮನಕ್ಕೆ ಬಂದರೆ ಮಕ್ಕಳು ಕೂಡಲೇ ೧೦೯೮ ಸಹಾಯವಾಣಿಗೆ ದೂರು ನೀಡಿ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಚ್ಯುತಿಯುಂಟು ಮಾಡುವುದು ಅಪರಾಧ, ಕಾರ್ಮಿಕರಾದ ನೀವು ನಿಮ್ಮ ಮಕ್ಕಳನ್ನು ವಯಸ್ಸಿಗೆ ಮುನ್ನವೇ ದುಡಿಮೆಗೆ ಕಳುಹಿಸಬಾರದು ಎಂದ ಅವರು,ಮಕ್ಕಳನ್ನು ಓದಿಸಿ ಸಾಧನೆಗೆ ದಾರಿ ತೋರುವ ಪೋಷಕರೇ ಬಾಲ್ಯವಿವಾಹಕ್ಕೆ ನೂಕುವುದು ಸರಿಯಲ್ಲ ಎಂದರು. ಲೈಂಗಿಕ ದೌರ್ಜನ್ಯ ನಿಷೇಧ, ಪರಿಹಾರ ಕಾಯ್ದೆ ನಮ್ಮ ದೇಶದಲ್ಲಿ ಜಾರಿಯಲ್ಲಿದ್ದು ಇದರನ್ವಯ ಪ್ರತಿ ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ಅನುಕೂಲಕ್ಕಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಅಂತರಿಕ ದೂರುಗಳ ಪರಿಹಾರ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕೆಂದು ಸಲಹೆ ನೀಡಿದರು.

ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ ಮಾತನಾಡಿ, ಕಾರ್ಮಿಕ ಇಲಾಖೆ ಕಾರ್ಮಿಕರಿಗಾಗಿಯೇ ಇದ್ದು, ಪ್ರತಿಯೊಬ್ಬರೂ ಗುರುತಿನ ಚೀಟಿ ಮಾಡಿಸಿಕೊಳ್ಳಿ, ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳಿ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಬಂಧ ವಿದ್ಯಾರ್ಥಿವೇತನ ನೀಡುತ್ತಿದ್ದು, ಸಕಾಲಕ್ಕೆ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.

ಸಾಯಿ ಆಶ್ರಯ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ಅಶೋಕ್ ಮಾತನಾಡಿದರು

ಕಾರ್ಯಕ್ರಮದಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದು, ವೇಮಗಲ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ