ಹಬ್ಬದ ಆಚರಣೆಯಿಂದ ಧರ್ಮ, ಸಂಸ್ಕೃತಿ ತಿಳಿವಳಿಕೆ

KannadaprabhaNewsNetwork |  
Published : Sep 18, 2024, 02:00 AM IST
ನಗರದ ಗಜಾನನ ಮಹಾಮಂಡಲದ ಸಾರ್ವಜನಿಕ ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮದ ಚಿತ್ರ | Kannada Prabha

ಸಾರಾಂಶ

ಹಬ್ಬದ ಆಚರಣೆಯ ಜತೆಗೆ ಧರ್ಮ, ಸಂಸ್ಕೃತಿ ಉಳಿಸುವ ಕೆಲಸವನ್ನು ಗಜಾನನ ಮಹಾಮಂಡಲ ಕಳೆದ 15 ವರ್ಷಗಳಿಂದ ಮಾಡುತ್ತ ಬಂದಿದೆ ಎಂದು ಗಜಾನನ ಮಹಾಮಂಡಳದ ಗೌರವಾಧ್ಯಕ್ಷ ಮುತ್ತಿನ ಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಹಬ್ಬದ ಆಚರಣೆಯ ಜತೆಗೆ ಧರ್ಮ, ಸಂಸ್ಕೃತಿ ಉಳಿಸುವ ಕೆಲಸವನ್ನು ಗಜಾನನ ಮಹಾಮಂಡಲ ಕಳೆದ 15 ವರ್ಷಗಳಿಂದ ಮಾಡುತ್ತ ಬಂದಿದೆ ಎಂದು ಗಜಾನನ ಮಹಾಮಂಡಳದ ಗೌರವಾಧ್ಯಕ್ಷ ಮುತ್ತಿನ ಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ನುಡಿದರು.

ನಗರದ ಹನುಮಾನ ವೃತ್ತದಲ್ಲಿ ಗಜಾನನ ಮಹಾಮಂಡಳ ಏರ್ಪಡಿಸಿದ್ದ ಸಾರ್ವಜನಿಕ ಗಣೇಶ ವಿಸರ್ಜನಾ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸಾರ್ವಜನಿಕ ಗಣೇಶ ಉತ್ಸವಕ್ಕೆ ಮಹಾಮಂಡಳದ ವತಿಯಿಂದ ಬಹುಮಾನಗಳನ್ನು ನೀಡುವ ಪರಂಪರೆಯಿಂದ ಸಾರ್ವಜನಿಕರಲ್ಲಿ ಉತ್ಸಾಹ ಹೆಚ್ಚುತ್ತದೆ. ಇದರಿಂದ ಹಬ್ಬದ ಆಚರಣೆಯ ಜತೆಗೆ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡುತ್ತದೆ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಇದೊಂದು ಸಂಸ್ಕೃತಿಕ ಹಬ್ಬವಾಗಿದೆ. ಇಲ್ಲಿ ಜಾತಿ, ಮತ, ಪಂಗಡ ಮರೆತು ಆಚರಣೆ ಮಾಡುತ್ತ ಬಂದಿರುವುದು ವಿಶೇಷವಾಗಿದೆ. ನಗರದ ಗಜಾನನ ಮಂಡಳಿಯವರು ವಿವಿಧ ವಾದ್ಯವೃಂದದವರನ್ನು ಕರೆಯಿಸಿ ಮೆರವಣಿಗೆ ಮೆರಗು ಹೆಚ್ಚಿಸಿದ್ದಾರೆ ಎಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಆಧ್ಯಾತ್ಮಿಕ ಕೇಂದ್ರ ಜಮಖಂಡಿಯಾಗಿದೆ. ಸ್ಥಳೀಯವಾಗಿ ಮಂಡಳಿಯು ಉತ್ತಮ ಕೆಲಸ ಮಾಡುತ್ತ ಬಂದಿದೆ. ಜಾತಿ, ಮತ, ಪಕ್ಷ, ಪಂಗಡ ಎಲ್ಲವನ್ನೂ ಒಗ್ಗೂಡಿಸಿ ಗಣೇಶ ಉತ್ಸವವನ್ನು ಕಳೆದ 15 ವರ್ಷದಿಂದ ನಡೆದು ಕೊಂಡು ಬಂದಿರುವ ಪರಂಪರೆ ಮುಂದು ವರೆಯಲಿ ಎಂದು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಸ್.ನ್ಯಾಮಗೌಡ, ನಗರಸಭೆ ಅಧ್ಯಕ್ಷ ಪರಮಗೊಂಡ ಗೌರೋಜಿ, ತಹಸೀಲ್ದಾರ್‌ ಸದಾಶಿವ ಮಕ್ಕೋಜಿ, ನಗರಸಭೆ ಸದಸ್ಯ ದಾನೇಶ ಘಾಟಗೆ, ಸುನೀಲ ಸಿಂಧೆ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಹುಲ ಕಲೂತಿ, ಧರ್ಮಲಿಂಗಯ್ಯ ಗುಡಗುಂಟಿ, ಮಹಾಮಂಡಳಿ ಅಧ್ಯಕ್ಷ ಸುನೀಲ ಭೂವಿ ಇದ್ದರು.

ದಾನಮ್ಮ ಬಡಾವಣೆಯ ಗಣೇಶ ಮಂಡಳಿಯ ಮೆರವಣಿಗೆಯಲ್ಲಿ ಮಲೆನಾಡು ಕರಾವಳಿಯ ಚಂಡಿ ವಾದ್ಯವು ಅದರ ಜತೆಗೆ ವಾರ್ಕರಿ ಭಜನೆಗಳು, ಮಕ್ಕಳ ನೃತ್ಯ, ಮಹಿಳೆಯರ ಸಂಭ್ರಮವು ಮೆರಗು ತಂದಿತ್ತು. ಸುಮಾರು 100ಕ್ಕೂ ಅಧಿಕ ಮಂಡಳಿಯ ಮೂರ್ತಿಗಳು ವಿಸರ್ಜನೆಗೊಂಡವು. ಪ್ರದೀಪ ಮೆಟಗುಡ್ಡ ನಿರೂಪಿಸಿದರು. ಶ್ರೀಧರ ಕೊಣ್ಣೂರ ಸ್ವಾಗತಿಸಿದರು.

PREV