ಕನ್ನಡಪ್ರಭ ವಾರ್ತೆ, ತುಮಕೂರುಶೈಕ್ಷಣಿಕ ಅಭಿವೃದ್ದಿಯ ದೃಷ್ಟಿಯಿಂದ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡನೆ ಮಾಡುವ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅವರು ಭೌಗೋಳಿಕ, ಆರ್ಥಿಕ, ಸಾಮಾಜಿಕ ಹಿನ್ನೆಲೆ ಹಾಗೂ ಅವರ ಪಡೆದಿರುವ ಜ್ಞಾನ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಲಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಕೆ. ರಾಮಕೃಷ್ಣ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರು ವಿವಿ ಅಧ್ಯಾಪಕರ ಸಂಘದ ವತಿಯಿಂದ ಆಯೋಜಿಸಿದ್ದ ವಿಕಸಿತ ಭಾರತಕ್ಕಾಗಿ ಶಿಕ್ಷಣ ಬಹುಶಿಸ್ತೀಯ ನಾವಿಣ್ಯತೆ, ಒಳಗೊಳ್ಳುವಿಕೆ ಹಾಗೂ ಸಮಗ್ರತೆ ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಒಂದು ಕಾಲೇಜಿನಲ್ಲಿ ವರ್ಷಕ್ಕೆ ಒಮ್ಮೆಯಾದರೂ ಇಂತಹ ವಿಚಾರ ಸಂಕಿರಣಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇಬ್ಬರಿಗೂ ಅನುಕೂಲವಾಗಲಿದೆ ಎಂದರು.ಪ್ರಚಲಿತ ವಿದ್ಯಮಾನ ಚರ್ಚಿಸಲು ಶೈಕ್ಷಣಿಕ ಸಮ್ಮೇಳನ ವೇದಿಕೆಯಾಗಿದ್ದು, ಬಹುಶಾಸ್ತ್ರೀಯ ಜ್ಞಾನದ ಅನಾವರಣವಾಗಲಿ. ಚರ್ಚೆಯ ವಿಷಯಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಹೊಸ ದಿಕ್ಸೂಚಿಯಾಗಲಿ ಎಂದು ಶುಭ ಹಾರೈಸಿದರು.ವಿಚಾರ ಸಂಕಿರಣದ ದಿಕ್ಸೂಚಿ ಭಾಷಣ ಮಾಡಿದ ತುಮಕೂರು ವಿವಿ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಭಾರತ ಇಂದು ಅತಿವೇಗದಲ್ಲಿ ಬೆಳೆವಣಿಗೆ ಹೊಂದುತ್ತಿರುವ ರಾಷ್ಟ್ರ. ಭಾರತದ ಜನಸಂಖ್ಯೆಯಲ್ಲಿ ಶೇಕಡ 45 ರಷ್ಟು ಜನ 35 ರಿಂದ 50 ವಯಸ್ಸಿನ ಯುವಜನರಿದ್ದಾರೆ. ಹಾಗಾಗಿಯೇ ಭಾರತವನ್ನು ಯಂಗ್ ಇಂಡಿಯಾ ಎಂದು ಕರೆಯಲಾಗುತ್ತಿದೆ. ಈ ಯುವಜನತೆಯನ್ನು ಸದ್ಬಳಕೆ ಮಾಡಿಕೊಂಡು ದೇಶವನ್ನು ಮುಂದೆ ತರುವ ನಿಟ್ಟಿನಲ್ಲಿ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.ಅಖಿಲ ಭಾರತ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಜಂಟಿ ಕಾರ್ಯದರ್ಶಿ ಗುಂತಾ ಲಕ್ಷ್ಮಣ ಮಾತನಾಡಿ, ಎಬಿಆರ್‌ಎಂಎಸ್ 30 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, 13 ಲಕ್ಷ ಸದಸ್ಯರನ್ನು ಒಳಗೊಂಡಿದೆ.ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಕರ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದೆ. ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಒಂದು ವರ್ಷದಲ್ಲಿ ಐದು ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದೆ. ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ದೊರೆಯಬೇಕು. ಭಾರತ ವಿಜ್ಞಾನ ತಂತ್ರಜ್ಞಾನದಲ್ಲಿ ಮೊದಲ ಸ್ಥಾನ ಪಡೆಯಬೇಕು, ಭಾರತದಲ್ಲಿ ತಾರತಮ್ಯರಹಿತ ಸಾಮಾಜಿಕ ಸಮಾನತೆ ಹಾಗೂ ರಕ್ಷಣೆಯ ವಿಷಯದಲ್ಲಿ ಸ್ವಾವಲಂಬನೆ ಸಾಧನೆ ಇದು ವಿಕಸಿತ ಭಾರತದ ಪ್ರಮುಖ ಉದ್ದೇಶವಾಗಿದೆ ಎಂದರು.ಹಂಪಿ ವಿವಿ ಕುಲಪತಿ ಪ್ರೊ,ಡಿ.ವಿ.ಪರಮಶಿವಮೂರ್ತಿ ಮಾತನಾಡಿ, 2047 ರ ವಿಕಸಿತ ಭಾರತಕ್ಕೆಎಂತಹ ಶಿಕ್ಷಣ ಬೇಕು ಎಂಬ ನೀಲ ನಕ್ಷೆ ಅತಿ ಅಗತ್ಯವಾಗಿದೆ,ಇದು ಬಹುತ್ವ ಭಾರತ, ಆಶ್ರಮದಿಂದ ಗುರುಕುಲ, ಈಗ ಸ್ವಾತಂತ್ರ ಸಂಸ್ಥೆಗಳ ಶಿಕ್ಷಣ ಹೀಗೆ ಬದಲಾವಣೆಗೊಂಡು, ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ವಂಚಿತ ಸಮುದಾಯಗಳಿಗೆ ಶಿಕ್ಷಣ ದೊರೆತು ಅವರು ಮುಖ್ಯವಾಹಿನಿಗೆ ಬರುವಂತಾಗಬೇಕು. ವಿಕಸಿತ ಭಾರತದ ಗುರಿ ಮುಟ್ಟಲು ಶಿಕ್ಷಣ ಮಹತ್ವದ ಪಾತ್ರ ವಹಿಸಲಿದೆ ಎಂದರು.ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ತಿಪ್ಪೇಸ್ವಾಮಿ ಮಾತನಾಡಿ, ಖಾಸಗಿ ಮತ್ತು ಸರಕಾರಿ ಕಾಲೇಜುಗಳ ಅಧ್ಯಾಪಕರು ಸೇರಿ ಸಂಘವನ್ನು ಸ್ಥಾಪಿಸಿ, ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಸಂಘದ ಎಲ್ಲರ ಸಹಕಾರದಿಂದ ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಸಾನ್ನಿಧ್ಯ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ವಿಚಾರ ಸಂಕಿರಣದಲ್ಲಿ ಚರ್ಚಿತ ವಿಷಯಗಳು ಆಚರಣೆಗೆ ಬರಬೇಕು. ಅಧ್ಯಾಪಕರು ನಡೆದಾಡುವ ಗ್ರಂಥಾಲಯ ಗಳಿದ್ದಂತೆ, ಭಾರತದ ಪ್ರಜಾಪ್ರಭುತ್ವ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಅನೇಕ ಸವಾಲುಗಳ ನಡುವೆ ಕೃಷಿ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಕೈಗಾರಿಕೆ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಇದಕ್ಕೆ ಆಡಳಿತ ನಡೆಸಿದ ನಾಯಕರು ಕಾರಣ.ವಿಕಸಿತ ಭಾರತವು ಬದಲಾಗುತ್ತಿದೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಉನ್ನತ ಶಿಕ್ಷಣ ಪೂರಕವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.ಜೆಎನ್‌ಯು ವಿವಿಯ ಪ್ರೊ,ರಮೇಶ ಸಾಲಿಯಾನ ಪ್ರಧಾನ ಭಾಷಣ ಮಾಡಿದರು. ಮೈಸೂರಿನ ಮುಕ್ತ ವಿವಿಯ ಡಾ.ಆರ್.ಎಚ್.ಪವಿತ್ರ,ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಡಿ.ವಸಂತ ಮಾತನಾಡಿದರು. ವೇದಿಕೆಯಲ್ಲಿಎಬಿಆರ್‌ಎಂಎಸ್‌ನ ಸಂಯೋಜಕ ಡಾ.ಶಿವಪೂಜಾಕೋಠಿ, ತುಮಕೂರು ವಿವಿ ಕಾಲೇಜುಅಧ್ಯಾಪಕರಸಂಘದ ಕಾರ್ಯದರ್ಶಿ ಡಾ.ನಾಗರಾಜು.ಎಂ.ಎಸ್, ಕರ್ನಾಟಕರಾಜ್ಯ ಸರಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಡಾ.ಆದಿನಾರಾಯಣ್, ಕಾರ್ಯದರ್ಶಿ ಡಾ.ಹೆಚ್.ಜಿ.ನಾರಾಯಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.