ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ.19 ಮತ್ತು 20ರಂದು ಎರಡು ದಿನಗಳ ಕಾಲ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ.ಎನ್.ಎಸ್.ರಾಮೇಗೌಡ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ 11ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಸಮಾರಂಭ ನಡೆಯಲಿದೆ ಎಂದರು.ವಿಜ್ಞಾನವನ್ನು ಧಾರ್ಮಿಕ ಹಾಗೂ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅರ್ಥೈಸುವ ಪ್ರಯತ್ನದಂತೆಯೇ ಧರ್ಮ ಹಾಗೂ ವೈದಿಕ ಸಂಸ್ಕೃತಿಯನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ ಮನುಕುಲದ ಉನ್ನತಿಗೆ ಪೂರಕ ಜ್ಞಾನವನ್ನು ಒದಗಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.
ಕೃಷಿ, ಕೈಗಾರಿಕೆ, ಪರಿಸರ ಸಂರಕ್ಷಣೆ, ಬದಲಾಗುತ್ತಿರುವ ಹವಾಮಾನ ತಾಂತ್ರಿಕ ಮತ್ತು ಸಾಮಾಜಿಕ ಹೀಗೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರದರ್ಶನಗಳನ್ನೂ ಸಹ ಈ ಮೇಳದಲ್ಲಿ ಆಯೋಜಿಸಲಾಗಿದೆ. ಅಲ್ಲದೇ, ಈ ಮೇಳವು ಹೊಸ ಆಲೋಚನೆಗಳು ಹಾಗೂ ಸಲಹೆಗಳನ್ನು ವಿಶೇಷವಾಗಿ ಇತ್ತೀಚಿನ ಯುವ ಜನತೆಯಿಂದ ಆಹ್ವಾನಿಸುತ್ತದೆ. ಈ ದಿಸೆಯಲ್ಲಿ ಈ ಮೇಳದಲ್ಲಿ ಜರುಗಲಿರುವ ಕಾರ್ಯಕ್ರಮಗಳು ಒಂದು ವಿನೂತನ ಪಯತ್ನವಾಗಿದೆ ಎಂದರು.ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಆಗುತ್ತಿರುವ ಇತ್ತೀಚಿನ ಹೊಸ ಆವಿಷ್ಕಾರಗಳನ್ನು ನಮ್ಮ ಶಿಕ್ಷಣ ಟ್ರಸ್ಟ್‌ನ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಏರ್ಪಡಿಸುವ ಹಲವು ಬಗೆಯ ಹೊಸ ವಿಜ್ಞಾನ ಪ್ರದರ್ಶನಗಳ ಮೂಲಕ ಯುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವುದೇ ಈ ಮೇಳದ ಉದ್ದೇಶವಾಗಿದೆ ಎಂದರು.
ವಸ್ತುಪ್ರದರ್ಶನಕ್ಕೆ200ಕ್ಕೂ ಹೆಚ್ಚು ಮಳಿಗೆ:ಶ್ರೀಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನಕ್ಕೆ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಮೌಲ್ಯದ ವಿಷಯಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆರು ಅಂಗ ಸಂಸ್ಥೆಗಳೂ ಸೇರಿದಂತೆ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಹೊರಗಿನ ಪ್ರತಿಷ್ಠಿತ ಕಾಲೇಜುಗಳು, ಸರ್ಕಾರಿ ಸಂಸ್ಥೆಗಳಾದ ಇಸ್ರೋ, ಎಚ್‌ಎಎಲ್, ಡಿಆರ್‌ಡಿಒ, ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಟೆಕ್ನಾಲಜಿಕಲ್ ಮ್ಯೂಸಿಯಂ, ಆಧ್ಯಾತ್ಮಿಕ ಕೇಂದ್ರಗಳು ಮೇಳದಲ್ಲಿ ಭಾಗವಹಿಸಲಿವೆ ಎಂದರು.
ಫೆ.19ರಂದು ಮೇಳಕ್ಕೆ ಚಾಲನೆ:ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗುವ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದ ವಸ್ತು ಪ್ರದರ್ಶನವನ್ನು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಧ್ಯಕ್ಷ ಪ್ರೊ.ಕೆ.ಜೆ. ವಿನೋಯ್ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್‌ಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ವಿಶೇಷ ಉಪನ್ಯಾಸ:ಮೇಳದ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದ ಬಳಿಕ ಅಂದು ಮಧ್ಯಾಹ್ನ 2.30ರಿಂದ 3.30ರ ವರೆಗೆ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಬಿಜಿಎಸ್‌ಐಟಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸೈಬರ್ ಸೆಕ್ಯೂರಿಟೀಸ್ ವಿಷಯ ಕುರಿತು ಬೆಂಗಳೂರಿನ ಗ್ಲೋಬಲ್ ಎಕ್ಸ್‌ಪರ್ಟೈಸ್ ಇನ್‌ಸೈಬರ್ ಸೆಕ್ಯುರಿಟೀಸ್ ಫಾರೆನ್‌ಸಿಕ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನ ಡಾ.ಯುದಶಂಕರ್ ಪುರಾಣಿಕ್ ಉಪನ್ಯಾಸ ನೀಡುವರು ಎಂದರು.
ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ನಮ್ಮ ಹೊಟ್ಟೆಯಲ್ಲೊಂದು ಮೆದುಳು ವಿಷಯ ಕುರಿತು ಥಟ್ ಅಂತ ಹೇಳಿ ಖ್ಯಾತಿಯ ವೈದ್ಯ ವಿಜ್ಞಾನ ಲೇಖಕ ಡಾ.ನಾ.ಸೋಮೇಶ್ವರ ಉಪನ್ಯಾಸ ನೀಡುವರು. ಮತ್ತು ಫಾರ್ಮಸಿ ಕಾಲೇಜಿನಲ್ಲಿ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ವೈಜ್ಞಾನಿಕ ಚಿಂತನೆ ವಿಷಯ ಕುರಿತು ವಿಧಾನ ಪರಿಷತ್ ಸದಸ್ಯೆ ಡಾ.ಎಸ್.ಆರ್.ಲೀಲಾ ಉಪನ್ಯಾಸ ನೀಡುವರು ಎಂದರು.ಚುಂಚಶ್ರೀಗಳಿಗೆ ಪಟ್ಟಾಭೀಷೇಕ:
ಫೆ.20ರಂದು ಬೆಳಗ್ಗೆ ಶ್ರೀಮಠದ ಬಿಜಿಎಸ್ ಸಭಾಭವನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ 11ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹರಿಯಾಣದ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ರಾಜಸ್ಥಾನದ ತಿಜಾರ ಶಾಸಕ ಮಹಂತ್ ಬಾಲಕ್‌ನಾಥ್ ಯೋಗಿ ಮತ್ತು ಗುಜರಾತ್ ವಡೋದರದ ರಾಜ್‌ಕೋಟ್‌ನ ಆರ್ಶ್ ವಿದ್ಯಾ ಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಭಾಗಿಯಾಗುವರು ಎಂದರು.ಎಸ್.ಸೋಮನಾಥ್‌ಗೆ ವಿಜ್ಞಾತಂ ಪ್ರಶಸ್ತಿ ಪ್ರದಾನ:
ಚಂದ್ರಯಾನ-3ರ ಯಶಸ್ಸಿನೊಂದಿಗೆ ಚರಿತ್ರೆ ಸೃಷ್ಟಿಸಿದ ಇಸ್ರೋ ಸಂಸ್ಥೆ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ 5 ಲಕ್ಷ ರು. ನಗದು ಹಾಗೂ ಪ್ರಶಸ್ತಿ ಪದಕವನ್ನೊಳಗೊಂಡ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ ಮತ್ತು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ.ಗುರುರಾಜ್ ಕರ್ಜಗಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.ಸಹಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ:
ಮೇಳದ ವಸ್ತು ಪ್ರದರ್ಶನದಲ್ಲಿ ರಾಜ್ಯ ಮತ್ತು ನೆರೆ ರಾಜ್ಯಗಳ ವಿದ್ಯಾರ್ಥಿಗಳೂ ಸೇರಿದಂತೆ ಸಹಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಶ್ರೀಮಠದಿಂದ ಕಲ್ಪಿಸಲಾಗುವುದು. ಸಾರ್ವಜನಿಕರು ಈ ಮೇಳದ ಪ್ರಯೋಜನ ಪಡೆದು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಟ್ರಸ್ಟ್‌ನ ರಿಜಿಸ್ಟ್ರಾರ್ ಚಂದ್ರೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ, ಕಾಲೇಜು ಸಮಿತಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಸಿಇಒ ಕಚೇರಿಯ ಸುಚೇತನ್‌ಕುಮಾರ್ ಇದ್ದರು.