ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ನಡೆಯಲಿರುವ ನಿರ್ದೇಶಕರ ಸ್ಥಾನದ ಚುನಾವಣೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಾಮಪತ್ರ ಸಲ್ಲಿಸಿದರು. ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾವಣಾಧಿಕಾರಿಗಳಾಗಿರುವ ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಂದಿನ 5 ವರ್ಷದ ಅವಧಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ ಉತ್ಸಾಹದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ ಎಂದರು.ಕಳೆದ 5 ವರ್ಷದ ಹಿಂದೆ ಅವಿರೋಧವಾಗಿ ಚುನಾವಣೆ ನಡೆದಿತ್ತು. ಅವಿರೋಧವಾಗಿ ಚುನಾವಣೆ ನಡೆಯುವುದರಿಂದ ತಾಲೂಕು, ಹೋಬಳಿ ಮಟ್ಟದ ಸಹಕಾರ ಸಂಘಗಳಲ್ಲಿ ಒಮ್ಮತದ ಅಭಿಪ್ರಾಯಗಳು ಮೂಡುತ್ತವೆ. ಯಾವುದೇ ವೈಷಮ್ಯ, ದ್ವೇಷ ಇರುವುದಿಲ್ಲ. ಅವಿರೋಧ ಆಯ್ಕೆಗೆ ನಮ್ಮ ಜಿಲ್ಲೆ ಮಾದರಿಯಾಗಿತ್ತು ತುಮಕೂರು ಜಿಲ್ಲೆ ಸಹಕಾರಿ ನಾಯಕತ್ವಕ್ಕೆ ಮಾದರಿಯಾಗಿದೆ. ಈ ಬಾರಿಯೂ ಅದೇ ರೀತಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲೂ ಚುನಾವಣಾ ಪ್ರಕ್ರಿಯೆ ಜರುಗುವುದಿಲ್ಲ ಎಂದು ನಂಬಿದ್ದೇನೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣದಲ್ಲಿ ಏನು ಆಗುತ್ತದೆ, ಏನು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಬೇರೆ ವಿಚಾರಗಳಿಗೆ ವಿಶೇಷವಾದ ಒತ್ತು ಕೊಡುವ ಅವಶ್ಯತೆ ಇಲ್ಲ ಎಂದರು.
ನಾಮಪತ್ರ ಸಲ್ಲಿಸಿದವರ ವಿವರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎ ವರ್ಗದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ತಿಪಟೂರಿನ ಶಾಸಕ ಕೆ. ಷಡಕ್ಷರಿ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಚಿ.ನಾ.ಹಳ್ಳಿಯ ಎಸ್.ಆರ್. ರಾಜಕುಮಾರ್, ಕುಣಿಗಲ್‌ನ ಬಿ. ಶಿವಣ್ಣ, ಪ್ರಮೋದ್ ಎಸ್., ಮಧುಗಿರಿಯ ಜಿ.ಜೆ. ರಾಜಣ್ಣ, ತುರುವೇಕೆರೆ ಎಂ. ಸಿದ್ದಲಿಂಗಪ್ಪ, ಸಿರಾ ಜಿ.ಎಸ್. ರವಿ, ಕೊರಟಗೆರೆ ಎಸ್. ಹನುಮಾನ್, ಗುಬ್ಬಿ ಹೆಚ್.ಸಿ. ಪ್ರಭಾಕರ್, ಬಿ ವರ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಟಿಎಪಿಸಿಎಂಎಸ್‌ನಿಂದ ಆರ್. ರಾಜೇಂದ್ರ, ಸಿ ವರ್ಗದಲ್ಲಿ ಪತ್ತಿನ ಸಹಕಾರ ಸಂಘದ ಎಸ್. ಲಕ್ಷ್ಮೀನಾರಾಯಣ್, ಡಿ ವರ್ಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿ. ನಾಗೇಶ್‌ಬಾಬು, ಡಿ (೧) ರಲ್ಲಿ ಮಹಿಳಾ ಸಹಕಾರ ಸಂಘದಿಂದ ಮಾಲತಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.