ಕನ್ನಡಪ್ರಭ ವಾರ್ತೆ ತುಮಕೂರು
ಕ್ಯಾತ್ಸಂದ್ರ ನಾಗರಿಕರ ಹಿತರಕ್ಷಣಾ ವೇದಿಕೆ, ಕೆ.ಎನ್.ಆರ್. ಅಭಿಮಾನಿ ಬಳಗ, ಆರ್.ಆರ್.ಅಭಿಮಾನಿ ಬಳಗ ಬಂದ್‌ಗೆ ಕರೆ ನೀಡಿತ್ತು. ಕ್ಯಾತ್ಸಂದ್ರದ ಎಲ್ಲಾ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದ್ದರು. ಹೀಗಾಗಿ, ಕ್ಯಾತ್ಸಂದ್ರದಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತಿತರ ಅಗತ್ಯ ಸೇವೆಗಳ ಹೊರತಾಗಿ ಉಳಿದೆಲ್ಲಾ ವ್ಯಾಪಾರ ಚುಟವಟಿಕೆಗಳು ದಿನವಿಡೀ ಬಂದ್ ಆಗಿದ್ದವು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕೆ.ಎನ್.ರಾಜಣ್ಣನವರ ಅಭಿಮಾನಿಗಳು, ಸಾರ್ವಜನಿಕರು ಕ್ಯಾತ್ಸಂದ್ರದಲ್ಲಿ ಜಮಾಯಿಸಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಮತ್ತೆ ಅವರನ್ನು ಸಂಪಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಧರಣಿಯಲ್ಲಿ ಮಾತನಾಡಿದ ಮುಖಂಡ ಕಲ್ಲಹಳ್ಳಿ ದೇವರಾಜು, ಕೆ.ಎನ್.ರಾಜಣ್ಣನವರು ಏನು ತಪ್ಪು ಮಾಡಿದರು ಎಂದು ಅವರಿಗೆ ಸಂಪುಟದಿಂದ ವಜಾಗೊಳಿಸಿದ ಶಿಕ್ಷೆ ನೀಡಿದ್ದೀರಿ? ಅವರು ಭ್ರಷ್ಟಾಚಾರ ಮಾಡಿದ್ದಾರಾ? ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡಲಿಲ್ಲವಾ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಕೆ.ಎನ್.ರಾಜಣ್ಣನವರ ಜನಪರ ಕೆಲಸಗಳು, ಅವರ ಏಳಿಗೆಯನ್ನು ಸಹಿಸಲಾಗದೆ ಅವರ ವಿರುದ್ಧ ಪಿತೂರಿ ಮಾಡಿ ಸಚಿವ ಸ್ಥಾನದಿಂದ ವಜಾ ಮಾಡಿರುವುದು ಅವರ ಅಪಾರ ಅಭಿಮಾನಿಗಳಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ. ಬಡವರ, ಶೋಷಿತರ ಧ್ವನಿಯಾಗಿ ಅವರಿಗೆ ಶಕ್ತಿ ತುಂಬುವ ಜನಾನುರಾಗಿ ನಾಯಕರಾದ ರಾಜಣ್ಣನವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮಾಜ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ನಮ್ಮ ಸಮಾಜದ ಹಲವಾರು ನಾಯಕರ ಜೊತೆಗೆ ಕೆ.ಎನ್.ರಾಜಣ್ಣನವರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದರು. ಇವರ ಸೇವೆ, ಕೊಡುಗೆ ಗುರುತಿಸದೆ, ಬಳಸಿ ಬಿಸಾಕುವಂತೆ ಮಂತ್ರಿ ಸ್ಥಾನದಿಂದ ವಜಾಗೊಳಿಸಿರುವುದನ್ನು ವಾಲ್ಮೀಕಿ ಸಮಾಜಕ್ಕೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಯಾವುದೇ ತಪ್ಪು ಮಾಡದ ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ. ಎಲ್ಲಾ ಸಮುದಾಯದವರಿಗೂ ಸಹಾಯ ಮಾಡುತ್ತಾ ಜನಾನುರಾಗಿ ನಾಯಕರಾಗಿ ಬೆಳೆದಿರುವ ರಾಜಣ್ಣನವರು ಹೇಳಿಕೆ ನೀಡಿದಾಗ, ಅದಕ್ಕೆ ಸಮಜಾಯಿಷಿಯನ್ನೂ ಕೇಳದೆ ಏಕಾಏಕಿ ವಜಾ ಮಾಡಿದ್ದು ಖಂಡನೀಯ ಎಂದರು.
ಮುಖಂಡರಾದ ಕೆ.ಜೆ.ಆನಂದಪ್ಪ, ಕೆ.ಎಚ್.ಜಯರಾಂ, ಟಿ.ಪಿ.ಮಂಜುನಾಥ್, ಲಕ್ಷ್ಮೀನಾರಾಯಣ, ನಾರಾಯಣಗೌಡ, ಯಶೋಧ ಶ್ರೀನಿವಾಸ್, ಧನಿಯಾಕುಮಾರ್, ನಯಾಜ್ ಅಹ್ಮದ್, ಮಾದೇಗೌಡ, ಸಂಪತ್‌ಕುಮಾರ್, ಪ್ರತಾಪ್ ಮದಕರಿ, ರಾಜೇಶ್ ದೊಡ್ಡಮನೆ ಇತರರಿದ್ದರು.