ಹಾವೇರಿ: ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಇಲ್ಲಿಯ ನಾಗೇಂದ್ರನಮಟ್ಟಿಯ ರಾಕ್ ಸ್ಟಾರ್-105 ಹೆಸರಿನ ಕೊಬ್ಬರಿ ಹೋರಿ ಶನಿವಾರ ಮೃತಪಟ್ಟಿದ್ದು, ಭಾನುವಾರ ಸಾವಿರಾರು ಅಭಿಮಾನಿಗಳು ನಗರದಲ್ಲಿ ಹೋರಿಯ ಮೃತದೇಹದ ಮೆರವಣಿಗೆಯನ್ನು ನೆರವೇರಿಸಿ ಕಣ್ಣೀರ ವಿದಾಯ ಹೇಳಿದರು.
ನಾಗೇಂದ್ರನ ಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡತಳವಾರ ಅವರಿಗೆ ಸೇರಿದ ಕೊಬ್ಬರಿ ಹೋರಿ ಶನಿವಾರ ರಾತ್ರಿ ವಯೋಸಹಜವಾಗಿ ಮೃತಪಟ್ಟಿದೆ. ಭಾನುವಾರ ನಾಗೇಂದ್ರನಮಟ್ಟಿಯ ಶಿಬಾರದ ಹತ್ತಿರ ಅಗಲಿದ ಹೋರಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಟ್ರ್ಯಾಕ್ಟರ್‌ನಲ್ಲಿ ರಾಕ್‌ಸ್ಟಾರ್ ಕೊಬ್ಬರಿ ಹೋರಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.
ಸಾವಿರಾರು ಅಭಿಮಾನಿಗಳ ಶೋಕ ಸಾಗರದ ಮಧ್ಯೆ ನಾಗೇಂದ್ರಮನಟ್ಟಿಯಿಂದ ಆರಂಭವಾದ ಮೆರವಣಿಗೆಯು ಎಪಿಎಂಸಿ ಬಳಿ ಹುಕ್ಕೇರಿಮಠದ ಮುಂಭಾಗದಲ್ಲಿನ ಎಂಜಿ ರಸ್ತೆಯಲ್ಲಿ ಹಾಯ್ದು, ಗಾಂಧಿ ವೃತ್ತ, ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಚರಿಸಿ ಹಳೆ ಊರು, ಹೊಸಮನಿ ರಸ್ತೆ, ಸುಭಾಸ ಸರ್ಕಲ್ ಮಾರ್ಗದಿಂದ ರೈಲ್ವೆ ಸ್ಟೇಶನ್ ಮಾರ್ಗದಿಂದ ಶಿವಬಸವನಗರದಲ್ಲಿ ಹಾಯ್ದು ಮರಳಿ ನಾಗೇಂದ್ರನಮಟ್ಟಿಗೆ ಆಗಮಿಸಿತು.
ಶಿಬಾರದ ಬಳಿ ಸಹಸ್ರಾರು ಅಭಿಮಾನಿಗಳ ಕಣ್ಣೀರಧಾರೆಯ ನಡುವೆ ರಾಕ್‌ಸ್ಟಾರ್ ಕೊಬ್ಬರಿ ಹೋರಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದಶಕದಿಂದ ಸಾಮ್ರಾಜ್ಯ ಆಳಿದ ಹೋರಿ: ಚಿಕ್ಕಪ್ಪ ದೊಡ್ಡತಳವಾರ ಅವರು ೨೦೧೧ರಲ್ಲಿ ರಾಕ್‌ಸ್ಟಾರ್ ಕೊಬ್ಬರಿ ಹೋರಿ ತಂದಿದ್ದರು. ಕಳೆದ 13 ವರ್ಷಗಳಿಂದ ಈ ಹೋರಿ ಬೇಸಾಯದ ಜತೆಗೆ ಕೊಬ್ಬರಿ ಹೋರಿ ಸ್ಪರ್ಧೆ, ಗಾಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುತ್ತಾ ಬಂದಿತ್ತು. ೨೦ ವರ್ಷಗಳ ಕಾಲ ಬದುಕಿದ್ದ ರಾಕ್‌ಸ್ಟಾರ್ ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೋರಿ ಉಳಿಸಿಕೊಳ್ಳಲು ಪರಿಶ್ರಮಿಸಿದರೂ ಸಾಧ್ಯವಾಗಲಿಲ್ಲ.
ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಮಾಲೀಕರಿಗೆ ತಂದು ಕೊಟ್ಟಿದ್ದ ರಾಕ್ ಸ್ಟಾರ್ ಸಹಸ್ರಾರು ಅಭಿಮಾನಿಗಳನ್ನು ಹೊಂದಿತ್ತು. ಇದರ ಖ್ಯಾತಿ ಪರರಾಜ್ಯಗಳಿಗೂ ಹಬ್ಬಿತ್ತು. ತಮಿಳುನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡಿತ್ತು. ನಟ ವಿಜಯ ರಾಘವೇಂದ್ರ ಅಭಿನಯದ ಜಗಮೆಚ್ಚಿದ ಮಗ ಚಲನಚಿತ್ರದಲ್ಲಿ ಕೂಡ ಇದು ಅಭಿನಯಿಸಿತ್ತು.ರಾಕ್‌ಸ್ಟಾರ್ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿತೆಂದರೆ ಬಹುಮಾನ ಕಟ್ಟಿಟ್ಟದ್ದು ಎಂಬ ಮಾತು ಸಾಮಾನ್ಯವಾಗಿತ್ತು. ಅಖಾಡದಲ್ಲಿಳಿದರೆ ಯಾರನ್ನೂ ಮುಟ್ಟಿಸಿಕೊಳ್ಳದೇ ಗುರಿ ಮುಟ್ಟುತ್ತಿತ್ತು. ಅದರ ಅರ್ಭಟ ನೋಡಿ ಅನೇಕರು ಅದರ ಹತ್ತಿರ ಹೋಗಲು ಭಯ ಪಡುತ್ತಿದ್ದರು. ಆದರೆ ಅಖಾಡದಿಂದ ಹೊರಕ್ಕೆ ಬಂದಮೇಲೆ ರಾಕ್‌ಸ್ಟಾರ್ ಸೌಮ್ಯ ಸ್ವಭಾವದ್ದಾಗಿತ್ತು. ಅದು ಸ್ಪರ್ಧೆಗೆ ಹೊರಟರೆ ಅಭಿಮಾನಿಗಳು ಅದನ್ನು ಹಿಂಬಾಲಿಸುತ್ತಿದ್ದರು. ಸಾವಿರಾರು ಜನರ ಕಣ್ಮಣಿಯಾಗಿದ್ದ ನೆಚ್ಚಿನ ಹೋರಿ ಮೃತಪಟ್ಟ ಸುದ್ದಿ ತಿಳಿದು ವಿವಿಧೆಡೆಯಿಂದ ಆಗಮಿಸಿದ್ದ ಜನರು ಪಾರ್ಥಿವ ಶರೀರದ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.
ಗಣ್ಯರಿಂದ ಅಂತಿಮ ನಮನ: ಹಾವೇರಿಯ ರಾಕ್‌ಸ್ಟಾರ್ ಕೊಬ್ಬರಿ ಹೋರಿ ಅಸು ನೀಗಿದ ಸುದ್ದಿ ತಿಳಿದು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ, ಆನಂದ ಗಡ್ಡದೇವರಮಠ, ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವೆಂಕಟೇಶ ನಾರಾಯಣಿ ಸೇರಿದಂತೆ ಅನೇಕರು ನಾಗೇಂದ್ರನಮಟ್ಟಿಗೆ ಆಗಮಿಸಿ ರಾಕ್‌ಸ್ಟಾರ್ ಕೊಬ್ಬರಿ ಹೋರಿಗೆ ಅಂತಿಮ ನಮನ ಸಲ್ಲಿಸಿದರು. ಬಸವರಾಜ ಬೊಮ್ಮಾಯಿ ಅವರೂ ಶೋಕ ವ್ಯಕ್ತಪಡಿಸಿದ್ದಾರೆ. ರಾಕ್ ಸ್ಟಾರ್ ಹೋರಿ ಸಾವಿನ ಸುದ್ದಿ ತಿಳಿದು ಬೇಸರವಾಯಿತು. ಅಗಲಿದ ಹೋರಿಗೆ ಅಂತಿಮ ನಮನ ಸಲ್ಲಿಸುತ್ತೇನೆ. ಹಾವೇರಿಯಲ್ಲೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಬೊಮ್ಮಾಯಿ ಎಕ್ಸ್ ಖಾತೆಯಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.