ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸದಸ್ಯರು ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ ಮಾತನಾಡಿ, ಔಷಧ ನಿಯಂತ್ರಣ ಇಲಾಖೆ ಸಾರ್ವಜನಿಕ ಹಿತದೃಷ್ಟಿಯಿಂದ ಹೊರ ತರುತ್ತಿರುವ ಹೊಸ ಕಾನೂನುಗಳ ಬಗ್ಗೆ ಸೂಕ್ತ ರೀತಿಯಲ್ಲಿ ಅರಿತುಕೊಳ್ಳುವ ಮೂಲಕ ಕಾನೂನು ಪಾಲನೆ ಅತ್ಯಗತ್ಯ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಔಷಧಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಅಲ್ಲಲ್ಲಿ ವರದಿಗಳು ಬರುತ್ತಿದ್ದು, ಆ ಬಗ್ಗೆ ಜನಜಾಗೃತಿ ಮತ್ತು ನಾರ್ಕೊಟಿಕ್ ಔಷಧಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಔಷಧ ವ್ಯಾಪಾರಸ್ಥರು ಮುಂದಾಗಬೇಕು, ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಔಷಧ ವ್ಯಾಪಾರಿಗಳ ಬಗ್ಗೆ ನಂಬಿಕೆ ಹೆಚ್ಚಿಸುವಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಔಷಧಗಳ ಹಾವಳಿಯನ್ನು ತಪ್ಪಿಸಲು ಈಗಾಗಲೇ ಔಷಧ ನಿಯಂತ್ರಣ ಇಲಾಖೆಯಿಂದ ಕೋಡ್ ವ್ಯವಸ್ಧೆ ಜಾರಿಯಾಗಿದ್ದು, ಅದನ್ನು ಪ್ರತಿಯೊಬ್ಬ ಔಷಧ ವ್ಯಾಪಾರಿ ಅಳವಡಿಸಿಕೊಂಡು ಪಾರದರ್ಶಕತೆಯೊಂದಿಗೆ ವ್ಯಾಪಾರ ಮಾಡುವ ಅಗತ್ಯವಿದೆ ಎಂದು ಹೇಳಿದರು.ಜಿಲ್ಲಾ ಸಂಘದ ಹಲವಾರು ವರ್ಷಗಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಉದ್ದೇಶಿತ ಫಾರ್ಮ ಭವನ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಭವನದ ಉದ್ಘಾಟನೆ ಜನವರಿಯಲ್ಲಿ ನಡೆಯಲಿದೆ ಎಂದು ಜೀವನ್ ಸಭೆಗೆ ತಿಳಿಸಿದರು.
ಸಂಘದ ಕಾರ್ಯದರ್ಶಿ ಪುರುಷೋತ್ತಮ ಡಿ.ಐ. ವಾರ್ಷಿಕ ವರದಿ ಮಂಡಿಸಿದರು. ಖಜಾಂಜಿ ಪ್ರಸಾದ್ ಗೌಡ ಲೆಕ್ಕ ಪರಿಶೋಧಕ ವರದಿ ಮಂಡಿಸಿದರು. ಜಂಟಿ ಕಾರ್ಯದರ್ಶಿ ವಸಂತ್ ವಂದಿಸಿದರು. ಇದೇ ಸಂದರ್ಭ ಸಾರ್ವಜನಿಕ ಮಾಹಿತಿಗಾಗಿ ಔಷಧಿ ವ್ಯಾಪಾರಸ್ಥರ ಸಂಘದಿಂದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.