ಜಾನಪದ ಕಲೆ ದಾಖಲೀಕರಿಸಿ: ಕೋಡಿರ ಲೋಕೇಶ್

KannadaprabhaNewsNetwork |  
Published : Mar 12, 2025, 12:46 AM IST
ಚಿತ್ರ  : 11ಎಂಡಿಕೆ3 : ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥರಾದ ಕೋಡಿರ ಲೋಕೇಶ್ ಮಾತನಾಡಿದರು.  | Kannada Prabha

ಸಾರಾಂಶ

ಸಾಹಿತ್ಯ, ಜಾನಪದ ಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೊಡಗು ಜಿಲ್ಲೆ ಶ್ರೀಮಂತಿಕೆ ಹೊಂದಿದ್ದು ಇವುಗಳನ್ನು ದಾಖಲೀಕರಣ ಮಾಡುವಂತಾಗಬೇಕು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಹಿತ್ಯ, ಜಾನಪದ ಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೊಡಗು ಜಿಲ್ಲೆ ಶ್ರೀಮಂತಿಕೆ ಹೊಂದಿದ್ದು, ಇವುಗಳನ್ನು ದಾಖಲೀಕರಣ ಮಾಡುವಂತಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥರಾದ ಕೋಡಿರ ಲೋಕೇಶ್ ಅವರು ಸಲಹೆ ಮಾಡಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಲೋಚನಾ ಡಾ.ಎಂ.ಜಿ.ನಾಗರಾಜ್ ದಂಪತಿಯವರ ದತ್ತಿ ಇವರ ವತಿಯಿಂದ ಮಂಗಳವಾರ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲೆಯ ಪುರಾತತ್ವ ಜಾನಪದ ಮತ್ತು ಪರಿಸರ ವಿಚಾರಗೋಷ್ಠಿ-ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ಜಿಲ್ಲೆ ಬಹುಸಂಸ್ಕೃತಿ ಒಳಗೊಂಡಿದ್ದು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಮತ್ತಷ್ಟು ಪಸರಿಸುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ ಪ್ರಾಚೀನ ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಕೋಡಿರ ಲೋಕೇಶ್ ಅವರು ಪ್ರತಿಪಾದಿಸಿದರು.

ಸಾಹಿತ್ಯ, ಇತಿಹಾಸ, ಜಾನಪದವು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಅವುಗಳನ್ನು ಮುಂದಿನ ಜನಾಂಗಕ್ಕೂ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.

ಕೊಡಗಿನಲ್ಲಿ ಹುಟ್ಟಿ ಬೆಳೆದವರು ಹಾಗೂ ಹತ್ತಿರದ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸಿ ಇಲ್ಲಿನ ಪರಂಪರೆಯನ್ನು ಸಾಹಿತ್ಯ ಮೂಲಕ ತಿಳಿಸಿರುವುದು ಮತ್ತೊಂದು ಕಡೆಯಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಶ್ರೀಮಂತಿಕೆ ಪರಂಪರೆ ಬೆಳಕು ಚೆಲ್ಲುವಲ್ಲಿ ಹಲವರು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.

ಸಾಹಿತಿ ಎಂ.ಜಿ.ನಾಗರಾಜ್ ಅವರು ಕೊಡಗು ಜಿಲ್ಲೆಯ ಬಗ್ಗೆ ತುಂಬಾ ಅದ್ಭುತವಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೊಡಗು ಜಿಲ್ಲೆಯ ಬಗ್ಗೆ ವೈವಿಧ್ಯವಾಗಿ ಬರೆದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಜಿ.ನಾಗರಾಜ್ ಅವರು ಒಂದು ರೀತಿ ನಡೆದಾಡುವ ಅರ್ಥಕೋಶ ಎಂದರೆ ತಪ್ಪಾಗಲಾರದು. ಸಾಹಿತ್ಯ, ಜಾನಪದ, ಇತಿಹಾಸ ಅಗಾಧ ಪಾಂಡಿತ್ಯ ಹೊಂದಿ, ತಮ್ಮದೇ ಆದ ಶೈಲಿಯಲ್ಲಿ ವರ್ಣಿಸಿದ್ದಾರೆ ಎಂದು ಕೋಡಿರ ಲೋಕೇಶ್ ಅವರು ವಿವರಿಸಿದರು.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ, ಕಲಾ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಬದುಕು ಹಸನ್ಮುಖವಾಗಬೇಕು. ಜಾನಪದ, ಕಲೆ, ಸಾಹಿತ್ಯ, ಇತಿಹಾಸವನ್ನು ಎಂ.ಜಿ.ನಾಗರಾಜ್ ಅವರು ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಕೊಡಗಿನ ಪರಿಸರ, ದೇವರ ಕಾಡುಗಳನ್ನು ಸಂರಕ್ಷಿಸುವಲ್ಲಿ ಹಲವರು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಮುಂದೆಯೂ ಸಹ ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಸಂರಕ್ಷಿಸಬೇಕು. ನಾಗರಿಕತೆ ಬೆಳೆದಂತೆ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಈ ಬಗ್ಗೆ ಚಿಂತಿಸಬೇಕು ಎಂದರು.

ವಿದ್ಯಾರ್ಥಿಗಳು ಸಾಹಿತ್ಯ, ಸಾಂಸ್ಕೃತಿಕ, ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯಕ್ಕೆ ಒತ್ತು ನೀಡಬೇಕು. ಭಾರತೀಸುತ, ಐ.ಮ.ಮುತ್ತಣ್ಣ, ಬಿ.ಡಿ.ಗಣಪತಿ, ಶಂಕರ್ ನಾರಾಯಣ ಭಟ್ ಸೇರಿದಂತೆ ಹಲವರು ಕೊಡಗಿನ ಸಾಹಿತ್ಯ ರಚನೆಗೆ ಶ್ರಮಿಸಿದ್ದಾರೆ ಎಂದರು.

ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ಉಪನ್ಯಾಸಕಿ ಪ್ರತಿಮಾ ರೈ ಅವರು ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿರಾಜ ಮಾರ್ಗ, ಅಮೋಘ ವರ್ಷ ಸೇರಿದಂತೆ ಹಲವರು ಸಾಹಿತ್ಯ ರಚಿಸಿದ್ದಾರೆ. ಪ್ರಾಚೀನ ಇತಿಹಾಸ, ಪುರಾಣಗಳನ್ನು ಕಾಣುತ್ತೇವೆ. ಇತಿಹಾಸ ಮತ್ತು ಪುರಾಣಗಳಲ್ಲಿ ಪ್ರಾತಿನಿಧ್ಯ ಹೊಂದಿದೆ. ಹಾಲೇರಿ ವಂಶಸ್ಥರು ಹೀಗೆ ಹಲವರ ಬಗ್ಗೆ ಬರೆದಿರುವುದನ್ನು ಕಾಣುತ್ತೇವೆ. ಬುಡಕಟ್ಟು ಜನರ ಬದುಕು ಮತ್ತು ಜಾನಪದ ಪರಿಸರ ಒಂದಕ್ಕೊಂದು ಸಂಬಂಧವಿದ್ದು, ಕೃಷಿ ಪ್ರದಾನ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವು ತನ್ನದೇ ಆದ ಸ್ಥಾನ ಹೊಂದಿದೆ ಎಂದರು.

ಪ್ರಕೃತಿಯ ಆರಾಧನೆ, ಮರ ಗಿಡಗಳನ್ನು ದೇವರ ರೂಪದಲ್ಲಿ ಪೂಜಿಸುವುದು, ಜಾನಪದ ಕಲೆಗಳನ್ನು ಪ್ರೀತಿಸುವುದು, ಗೌರವಿಸುವುದು, ಕೊಡಗಿನ ಸಾಂಸ್ಕೃತಿಕ ಹಬ್ಬಗಳಾದ ಹುತ್ತರಿ, ಕೈಪೋಳ್ದ್, ಕಾವೇರಿ ಸಂಕ್ರಮಣ, ಹಬ್ಬಗಳು ವೈಶಿಷ್ಯತೆಯಿಂದ ಕೂಡಿವೆ ಎಂದರು.

ಕೊಡಗು ಜಿಲ್ಲೆಯ ಆಚಾರ-ವಿಚಾರ, ಪರಂಪರೆ, ಪದ್ಧತಿ ಸ್ಮರಣೀಯವಾಗಿದ್ದು, ಎಲ್ಲರೂ ಒಟ್ಟುಗೂಡಿದಾಗ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು. ಕೊಡಗಿನ ಸಾಂಸ್ಕೃತಿಕ ಪರಂಪರೆ ಉಳಿಸಬೇಕು. ಮೌಲ್ಯಗಳು ಕುಸಿಯದಂತೆ ಎಚ್ಚರವಹಿಸಬೇಕು ಎಂದರು.

ಸಾಹಿತಿ, ಖ್ಯಾತ ಸಂಶೋಧಕರು ಹಾಗೂ ದತ್ತಿದಾನಿಗಳಾದ ಡಾ.ಎಂ.ಜಿ.ನಾಗರಾಜ್ ಅವರು ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಉಳಿಸಬೇಕು. ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳಬೇಕು ಎಂದರು.

ಎಫ್‌ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಮೇ.ಪ್ರೊ.ಬಿ.ರಾಘವ ಅವರು ಮಾತನಾಡಿ ಆಧುನಿಕತೆ ಹೆಸರಿನಲ್ಲಿ ಸಮಾಜ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂಬ ಬಗ್ಗೆ ಯೋಚಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ದೌರ್ಜನ್ಯ ನಿಲ್ಲಬೇಕು. ಬುಡಕಟ್ಟು ಸಂಸ್ಕೃತಿಯ ಮೇಲೆ ಒಂದಲ್ಲ ಒಂದು ರೀತಿ ದಾಳಿ ನಡೆಯುತ್ತಿದ್ದು, ಇದು ಕೊನೆಯಾಗಬೇಕು ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿ ಮುನಿರ್ ಅಹಮದ್ ಅವರು ಮಾತನಾಡಿದರು.

ವಿಚಾರಗೋಷ್ಠಿಯಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ.ಜಮೀರ್ ಅಹ್ಮದ್, ನಿವೃತ್ತ ಪ್ರಾಂಶುಪಾಲರಾದ ಡಾ.ಜೆ.ಸೋಮಣ್ಣ, ಅರಣ್ಯ ಕಾಲೇಜಿನ ನಿವೃತ್ತ ಮುಖ್ಯಸ್ಥರಾದ ಡಾ.ಸಿ.ಜಿ.ಕುಶಾಲಪ್ಪ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಅವರು ಮಾತನಾಡಿದರು.

ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಚೊಕ್ಕಾಡಿ ಪ್ರೇಮ ರಾಘವಯ್ಯ ಇದ್ದರು. ಕವಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಸಾಹಿತಿ ಬಿ.ಎ.ಷಂಶುದ್ದೀನ್, ಪ್ರಾಧ್ಯಾಪಕರಾದ ಡಾ.ನಯನ ಕಶ್ಯಪ್ ಮಾತನಾಡಿದರು. ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಎಫ್‌ಎಂಸಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಶೈಲಶ್ರೀ, ಎಚ್.ಕೆ.ರೇಣುಶ್ರೀ ಇತರರು ಇದ್ದರು.

ಲೀಲಾವತಿ ತೊಡಿಕಾನ, ಶ್ವೇತ ರವೀಂದ್ರ, ಡಾ.ಕಾವೇರಿ ಪ್ರಕಾಶ್, ಪುಪ್ಪಲತಾ ಶಿವಪ್ಪ, ವಿಮಲದಶರಥ, ಗಿರೀಶ್ ಕಿಗ್ಗಾಲು, ಜಗದೀಶ್ ಜೋಡುಬೀಟಿ, ಅರ್ಪಿತ ಕೆ.ಜಿ., ಟಾಮಿ ತೋಮಸ್, ಹವ್ಯಾಸ್ ವೈಲೇಶ್, ಪುದಿಯ ನೆರವನ ರೇವತಿ ರಮೇಶ್ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ