ಕೆ.ಜಿ.ರಮ್ಯ ಕವನ ಸಂಕಲನಕ್ಕೆ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : May 22, 2024, 12:47 AM IST
ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ | Kannada Prabha

ಸಾರಾಂಶ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ: 50 ರ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ 2023-24 ನೇ ಸಾಲಿನ ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಕೆ.ಜಿ.ರಮ್ಯಾ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕವಿತೆ ರಚನೆಗೆ ಯಾವುದೇ ಛಂದ, ಬಂಧ, ಪ್ರಾಸ, ಧೋರಣೆ, ವಸ್ತು, ಆಶಯಗಳಂತಹ ಸಿದ್ಧ ರಚನೆ ಇರಬೇಕಿಲ್ಲ. ವಾಸ್ತವಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕ ಸನ್ನಿವೇಶದಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುವ ಕವಿತೆಗಳು ಗಟ್ಟಿಯಾಗಿ ನೆಲೆಯೂರುತ್ತವೆ ಎಂದು ಮಡಿಕೇರಿ ತಾಲೂಕಿನ ಗಾಳಿಬೀಡು ಜವಹರ್ ನವೋದಯ ವಿದ್ಯಾಲಯದ ಕನ್ನಡ ಅಧ್ಯಾಪಕ, ಸಾಹಿತಿ ಮಾರುತಿ ದಾಸಣ್ಣನವರ್ ಹೇಳಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ: 50 ರ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ 2023-24 ನೇ ಸಾಲಿನ ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಪೂರ್ವಾಗ್ರಹದ ಕನ್ನಡಕ ಹಾಕಿಕೊಂಡೇ ಒಂದು ಕವಿತೆ ಪರೀಕ್ಷೆಗೊಳಪಡಿಸುವುದು ಅಷ್ಟೊಂದು ಸೂಕ್ತವಲ್ಲ. ಅದನ್ನು ಸುಮ್ಮನೇ ತೆರೆದ ಮನಸ್ಸಿನಲ್ಲಿ ಓದಬೇಕು ಮತ್ತು ಅನುಭವಿಸಬೇಕು ಎಂದರು.

ಕವಯಿತ್ರಿ ಕೆ.ಜಿ.ರಮ್ಯ ಅವರ ‘ದಾಹಗಳ ಮೈ ಸವರುತ್ತಾ’ ಕವನ ಸಂಕಲನದ ಕವನಗಳಲ್ಲಿ ಕವನಗಳು ಶೋಷಿತ ಮಹಿಳೆಯರ ನೋವು- ನಲಿವುಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಹೆಣ್ಣೊಬ್ಬಳೊಳಗಿನ ನೋವು ಮತ್ತು ಆಕ್ರೋಶವನ್ನು ನಿರ್ಭೀತವಾಗಿ ನಿರ್ಭಿಡೆಯಿಂದ ಕಾವ್ಯದಲ್ಲಿ ಅಭಿವ್ಯಕ್ತಿಗೊಳಿಸಲಾಗಿದೆ ಎಂದು ಅವದು ವಿಮರ್ಶಿಸಿದರು.

ನೋವುಂಡ ಎದೆ ದನಿಗಳನ್ನೂ, ಬದುಕು ಬದಲಾಗುವ ಸಾಧ್ಯತೆಗಳನ್ನೂ ಪ್ರಕೃತಿಯ ಅನಂತತೆಯನ್ನೂ ಉಸಿರ ಕವಿತೆಗಳು ಕಲಿಸಿ ಕೊಟ್ಟಿವೆ ಎಂದು ದಾಸಣ್ಣನವರ್ ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗೌರಮ್ಮ ದತ್ತಿ ಪ್ರಶಸ್ತಿ ಆರಂಭದ ಹಂತದಲ್ಲಿ ಜಿಲ್ಲೆಯಲ್ಲಿದ್ದ ಮಹಿಳಾ ಬರಹಗಾರರ ಕೊರತೆ ಇದೀಗ ನೀಗಿದ್ದು, ಇಂದು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಸಾಹಿತಿಗಳು ಬೆಳೆದಿರುವುದು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಈ ತನಕ ಕೊಡಗಿನ ಗೌರಮ್ಮ ದತ್ತಿ ಪುರಸ್ಕೃತರು ರಚಿಸಿರುವ ಎಲ್ಲಾ ಕೃತಿಗಳನ್ನು ಸಂಗ್ರಹಿಸಿ 25 ನೇ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಗೌರಮ್ಮ ಸಮಗ್ರ ಗ್ರಂಥವನ್ನು ಹೊರ ತರುವ ಉದ್ದೇಶ ಹೊಂದಲಾಗಿದೆ. ಈ ಸಮಗ್ರ ಗ್ರಂಥವನ್ನು ಜಿಲ್ಲೆಯ ಶಾಲಾ- ಕಾಲೇಜಿನ ಗ್ರಂಥಾಲಯಕ್ಕೆ ನೀಡುವ ಮೂಲಕ ವಿದ್ಯಾರ್ಥಿಗಳ ಕಥಾ ಸಾಹಿತ್ಯ ರಚನೆಗೆ ಪ್ರೇರೇಪಣೆ ನೀಡಲಾಗುವುದು ಎಂದರು.

ಮುಖ್ಯ ಭಾಷಣ ಮಾಡಿದ ಸಾಹಿತಿ, ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತ ಸುನಿತಾ ಲೋಕೇಶ್, ಮಹಿಳಾ ಸಾಹಿತ್ಯದ ಬೆಳವಣಿಗೆ ಹಾಗೂ ಕೊಡಗಿನ ಕಥೆಗಾರ್ತಿ ಗೌರಮ್ಮ ಅವರ ಕಥೆಗಳ ಕುರಿತು ವಿವರಣೆ ನೀಡಿ, ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಬರಹಗಾರರ ಸಂಖ್ಯೆ ವೃದ್ಧಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್, ಮಹಿಳಾ ಬರಹಗಾರರ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕ.ಸಾ.ಪ.ವತಿಯಿಂದ ನೀಡುವ ಕೊಡಗಿನ ಪ್ರತಿಷ್ಠಿತ ಪ್ರಶಸ್ತಿಯಾದ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಕವಿಯಿತ್ರಿ ಕೆ.ಜಿ. ರಮ್ಯ ಅವರ ‘ದಾಹಗಳ ಮೈ ಸವರುತ್ತಾ’

ಕವನ ಸಂಕಲನಕ್ಕೆ ಲಭಿಸಿದೆ ಎಂದರು.

ಗೌರಮ್ಮ ಪ್ರಶಸ್ತಿ ಪುರಸ್ಕೃತ ಕೆ.ಜಿ.ರಮ್ಯ , ತಾವು ಕವನ ರಚಿಸಲು ತಮ್ಮ ಪರಿಸರದಲ್ಲಿ ಸಿಕ್ಕಿದ ಪ್ರೇರಣೆ ಹಾಗೂ ಸ್ನೇಹಿತರು ಮತ್ತು ಕುಟುಂಬದ ಸಹಕಾರ ಸ್ಮರಿಸಿದರು.

ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಎಸ್.ಸುನಿಲ್ ಕುಮಾರ್ , ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಸಹಕಾರಿಯಾಗಿವೆ ಎಂದರು.

ಪ್ರಾಂಶುಪಾಲ ಪ್ರೊ.ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪ್ರಶಸ್ತಿ ಪುರಸ್ಕೃತರಾದ ಕೆ.ಜಿ.ರಮ್ಯ ಪರಿಚಯ ಮಾಡಿದರು.

ಜಿಲ್ಲಾ ಕ.ಸಾ.ಪ.ಸಮಿತಿ ನಿರ್ದೇಶಕ ಮೆ.ನಾ. ವೆಂಕಟನಾಯಕ್, ಮಡಿಕೇರಿ ತಾಲೂಕು ಕ.ಸಾ.ಪ.ಅಧ್ಯಕ್ಷ ಕಡ್ಲೇರ ತುಳಸಿ, ಕುಶಾಲನಗರ ತಾಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕೋಶಾಧಿಕಾರಿ ಕೆ.ವಿ.ಉಮೇಶ್ , ಹೆಬ್ಬಾಲೆ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎನ್.ಮೂರ್ತಿ ಮತ್ತಿತರರು ಇದ್ದರು.

ಉಪನ್ಯಾಸಕ ಎಸ್.ಆರ್.ಚರಣರಾಜ್ ಸ್ವಾಗತಿಸಿದರು. ತಾಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್ ವಂದಿಸಿದರು. ಡಾ ಎಸ್.ಸುನಿಲ್ ಕುಮಾರ್ ನಿರ್ವಹಿಸಿದರು. ಕವಿಯಿತ್ರಿ ರಮ್ಯ ಅವರ ಕವನಗಳನ್ನು ಸೌಮ್ಯಶೆಟ್ಟಿ ಮತ್ತು ಮಂಜುಳಾ ಚಿತ್ತಾಪುರ್ ವಾಚಿಸಿದರು.

ಶ್ರದ್ಧಾಂಜಲಿ:

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ದೇಶದ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಮತ್ತು ಇತರರ ಸ್ಮರಣಾರ್ಥ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಭೆಯಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!