ಕನ್ನಡಪ್ರಭ ವಾರ್ತೆ ಮಡಿಕೇರಿ
ಡಿ. 2006ರಲ್ಲಿ ಅಯ್ಯಂಗೇರಿಯ 13ರ ಹರೆಯದ ಬಾಲಕಿ ಸಫಿಯಾಳ ಕೊಲೆ ಗೋವಾದಲ್ಲಿ ನಡೆದಿತ್ತು. ಜೂನ್ 5, 2008 ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿದ್ದವು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ಸೋಮವಾರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ.
ಪ್ರಕರಣ ವಿವರ: ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾಳನ್ನು ಕಾಸರಗೋಡಿನ ಮುಲಿಯಾರ್ ಮಸ್ತಿಕುಂದ್‌ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನ ದಂಪತಿ 2006ರಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಹಂಝ ದಂಪತಿ ಗೋವಾಕ್ಕೆ ಸ್ಥಳಾಂತರವಾಗಿದ್ದರು. ಈ ವೇಳೆ ಸಫಿಯಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು.ಕೆಲ ತಿಂಗಳ ಬಳಿಕ ಸಫಿಯಾಳನ್ನು ಕಾಸರಗೋಡಿಗೆ ಕರೆದುಕೊಂಡು ಬರುತ್ತೇನೆ ಎಂದು ಹಂಝ ಬಾಲಕಿಯ ತಂದೆ ಮೊಯ್ದು ಅವರಿಗೆ ತಿಳಿಸಿದ್ದರು. ಮಗಳನ್ನು ಬರಮಾಡಿಕೊಳ್ಳಲು ಆಕೆಯ ಇಷ್ಟದ ನೆಲ್ಲಿಕಾಯಿಯ ಜೊತೆ ಮೊಯ್ದು ಅವರು ಕಾಸರಗೋಡಿಗೆ ತೆರಳಿದಾಗ, ಸಫಿಯಾ ಕಾಣೆಯಾಗಿದ್ದಾಳೆ ಎಂದು ಹಂಝ ಹೇಳಿದ್ದರು. ಬಳಿಕ ಬಾಲಕಿಯ ತಂದೆ ಮತ್ತು ಹಂಝ ಜೊತೆಯಾಗಿ ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕ್ರೈ ಬ್ರಾಂಚ್ ತನಿಖೆಯಲ್ಲಿ ಸಫಿಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಹಂಝ ಕೊಲೆ ಮಾಡಿರುವುದು ಬಯಲಾಗಿತ್ತು. ಹಂಝ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಗಂಜಿ ಸಫಿಯಾಳ ಮೈಮೇಲೆ ಬಿದ್ದಿತ್ತು. ಇದರಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಸಫಿಯಾಳನ್ನು ಹಂಝ ಕ್ರೂರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ನಂತರ ಗೋವಾದ ಅಣೆಕಟ್ಟೆಯೊಂದರ ಬಳಿ ಹೂತಿದ್ದ.
ಪ್ರಕರಣ ಸಂಬಂಧ 2008ರಲ್ಲಿ ಹಂಝನನ್ನು ಬಂಧಿಸಲಾಗಿತ್ತು. ಜುಲೈ, 2015ರಲ್ಲಿ ಕಾಸರಗೋಡು ಸೆಷನ್ ನ್ಯಾಯಾಲಯ ಹಂಝಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು.