)
ಮಡಿಕೇರಿ: ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘ ಹಾಗೂ ಯುವ ಘಟಕ ಮತ್ತು ಮಹಿಳಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸೀಸನ್-೨ ಮಾಯಾಮುಡಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅ.೩೧ ಮತ್ತು ನ.೧ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದಾಮೋದರ್ ತಿಳಿಸಿದರು.
ಕ್ರೀಡಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಸೀಸನ್-೨ರಲ್ಲಿ ಮೊದಲ ೧೦ ತಂಡಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ೪ ಓವರ್ನ ಪಂದ್ಯಾಟ ಇದಾಗಿದ್ದು, ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಪಿ ಮತ್ತು ನಗದು ನೀಡಿ ಗೌರವಿಸಲಾಗುವುದು. ಜತೆಗೆ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಅ.೩೧ರಂದು ಬೆಳಗ್ಗೆ ೮ ಗಂಟೆಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ದಾಮೋದರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಕೋಟಿ, ಮಾಜಿ ಅಧ್ಯಕ್ಷ ಎಂ.ಡಿ.ನಾಣಯ್ಯ, ಕುಶಾಲಪ್ಪ ಮೂಲ್ಯ, ಮಾಯಮುಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಸೇರಿದಂತೆ ಹಲವು ಗಣ್ಯರು ಗೌರವ ಉಪಸ್ಥಿತರಿರಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳ ಜನಪ್ರತಿನಿಧಿಗಳು, ಕಾಫಿ ಬೆಳೆಗಾರರು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಪಂದ್ಯಾವಳಿಯ ಸಮಾರೋಪ ಸಮಾರಂಭ ನ.೧ರಂದು ಭಾನುವಾರ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ. ಸಂಘದ ಅಧ್ಯಕ್ಷ ದಾಮೋದರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕಾಫಿ ಬೆಳೆಗಾರರಾದ ಕೆ.ಯು.ಗಣಪತಿ, ಕೆ.ಟಿ.ಬಿದ್ದಪ್ಪ, ಕೆ.ಸಿ.ಸುದೀರ್, ಎಸ್.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಜೆ.ಪಿ.ಕುಲಾಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.