ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಜಿಲ್ಲೆ ಹಾಗೂ ನೆರೆಯ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೀಡಾಗದೇ ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ನಾಡಿನ ಪ್ರಗತಿಯ ಸಂಕೇತವಾಗಿದೆ. ಒಂದು ವಿಶ್ವವಿದ್ಯಾಲಯ ಆ ಪ್ರದೇಶದ ಭೌಗೊಳಿಕ ಸನ್ನಿವೇಶ, ಸಮುದಾಯದ ಅಸ್ಥಿತೆ ಮತ್ತು ಶೈಕ್ಷಣಿಕ ಆಶೋತ್ತರಗಳು ಸೇರಿದಂತೆ ಇತ್ಯಾದಿಗಳ ಸಾಕ್ಷಾತ್ಕಾರವಾಗಿರುತ್ತದೆ. ಸಮಾಜದ ದುರ್ಬಲ ವರ್ಗ, ಗ್ರಾಮೀಣದ ಬಡಜನರು, ಹೆಣ್ಣು ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಜನಾಂಗ, ಅಲ್ಪಸಂಖ್ಯಾತರು ಸಾಕ್ಷಾತ್ಕಾರಗೊಳಿಸುವ ಜ್ಞಾನ ದೇಗುಲವೇ ವಿಶ್ವವಿದ್ಯಾಲಯವಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.ಕೊಡಗು ಜಿಲ್ಲೆ ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ವಿಶಿಷ್ಟ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು, ಅತೀ ಹೆಚ್ಚು ಮಳೆ ಬೀಳುವ ಗುಡ್ಡಗಾಡು ಪ್ರದೇಶವಾಗಿದೆ. ಕಡಿಮೆ ಜನಸಾಂದ್ರತೆ ಹೊಂದಿರುವ ಈ ಜಿಲ್ಲೆಯನ್ನು ವಿಶೇಷ ಅಗತ್ಯತೆ ಇರುವ ಜಿಲ್ಲೆಯೆಂದು ವರ್ಗೀಕರಿಸಲಾಗಿದೆ. ಇಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಶೇ.೧೮ ಆಗಿದ್ದು, ರಾಜ್ಯದ ಅನುಪಾತದ ಅರ್ಧದಷ್ಟಾಗಿದೆ. ಇದು ರಾಜ್ಯದಲ್ಲಿ ೨೬ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಗಿರಿಜನರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರ ಸಂಖ್ಯೆ ಅಧಿಕವಾಗಿರುವುದರಿಂದ ಕೊಡಗಿನಲ್ಲಿ ಉನ್ನತ ಶಿಕ್ಷದ ಒಟ್ಟು ದಾಖಲಾತಿ ಅನುಪಾತ ಪ್ರಮಾಣ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೊಡಗು ವಿವಿ ವ್ಯಾಪ್ತಿಯಲ್ಲಿ ೧ ಘಟಕ ಕಾಲೇಜು, ಆರು ಸರ್ಕಾರಿ ಕಾಲೇಜು, ಮೂರು ಅನುದಾನಿತ ಕಾಲೇಜು ಮತ್ತು ೧೪ ಖಾಸಗಿ ಕಾಲೇಜುಗಳಿವೆ. ಈ ಸಂಸ್ಥೆಗಳು ಸುಸಜ್ಜಿತವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕಲಿಕೆಗೆ ಭೌತಿಕ ಹಾಗೂ ಬೋಧನಾ ಸಂಪನ್ಮೂಲವನ್ನು ಒದಗಿಸುವಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದು, ಈ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ ಮುಂತಾದವುಗಳಿಗೆ ಸಂಪೂರ್ಣ ಸಹಯೋಗ ನೀಡುತ್ತದೆ ಎಂದರು.
ಕೊಡಗು ವಿಶ್ವವಿದ್ಯಾಲಯವು ಯುಜಿಸಿ ನಿಯಮದ ಪರಿಚ್ಛೇದ ೨(ಎಫ್) ಅಡಿಯಲ್ಲಿ ಮಾನ್ಯತೆ ಪಡೆದಿದೆ. ಬಿಸಿಎ, ಬಿಬಿಎ, ಎಂಬಿಎ, ಎಂಸಿಎ ಕಾರ್ಯಕ್ರಮಗಳಿಗೆ ವಿಶೇಷವಾಗಿ ಎಐಸಿಟಿಇ ಮಾನ್ಯತೆ ದೊರೆತಿದೆ. ಕೊಡಗು ವಿವಿ ಸಂಯೋಜಿತ ಕಾಲೇಜುಗಳಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ (ಎಐ/ಎಂಎಲ್) ಬಿ.ಸಿ.ಎ, ಬಿ.ಬಿ.ಎ (ಟಿಟಿಎಂ), ಬಿಎ (ಹೆಚ್.ಆರ್.ಡಿ), ಬಿಎಸ್‌ಡಬ್ಲ್ಯೂ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಅಧ್ಯಯನಕ್ಕೆ ಲಭ್ಯವಿದೆ. ಕೊಡಗು ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳಾದ ಎಂ.ಎ, ಎಂ.ಎಸ್ಸಿ, ಎಂ.ಕಾಂ, ಎಂ.ಎಸ್.ಡಬ್ಲ್ಯೂ ಕೋರ್ಸ್‌ಗಳು ನಡೆಯುತ್ತಿದ್ದು, ೨೦೨೫-೨೬ನೇ ಶೈಕ್ಷಣಿಕ ಸಾಲಿನಿಂದ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿಗಳನ್ನು ಕೇಂದ್ರ ಸ್ಥಾನದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಹೇಳಿದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ರಾಘವ ಮಾತನಾಡಿ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೊಡಗು ವಿವಿ ವಿಶೇಷ ಅಧಿಕಾರಿ(ಪರೀಕ್ಷಾಂಗ) ಪ್ರೊ.ಎಂ.ಎನ್.ರವಿ ಶಂಕರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶ್ರಿಧರ್ ಹೆಗಡೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.ಕೊಡಗು ವಿಶ್ವ ವಿದ್ಯಾಲಯದ ಅಸ್ತಿತ್ವ ಹಾಗೂ ಮುಂದುವರಿಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ. ಅದು ಈಗಾಗಲೇ ಮುಕ್ತಾಯಗೊಂಡ ಪ್ರಕ್ರಿಯೆ. ಈ ಬಗ್ಗೆ ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಭಯಪಡುವ ಅಗತ್ಯವಿಲ್ಲ. 2025-26ನೇ ಸಾಲಿನ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಯಾವುದೇ ಗೊಂದಲವಿಲ್ಲದೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಬಹುದು.। ಪ್ರೊ.ಅಶೋಕ ಸಂಗಪ್ಪ ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯಕೊಡಗು ವಿಶ್ವವಿದ್ಯಾಲಯ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪ್ರಕಟಿಸುವಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅತೀ ಶೀಘ್ರವಾಗಿ ಪರಿಹರಿಸುವಲ್ಲಿ ದಾಖಲೆಯನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಕನಿಷ್ಟ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕಾಳಜಿ ವಹಿಸುತ್ತದೆ.
। ಪ್ರೊ.ಎಂ.ಸುರೇಶ, ಕೊಡಗು ವಿವಿ ಕುಲಸಚಿವ(ಪರೀಕ್ಷಾಂಗ)