ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ : ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ನೂತನವಾಗಿ ಆರಂಭಿಸಲಾದ ಕೊಡಗು ವಿಶ್ವ ವಿದ್ಯಾಲಯ ಮುಚ್ಚುವುದು ಬಹುತೇಕ ಖಚಿತಗೊಳ್ಳುತ್ತಿದೆ. ಕಳೆದ ಎರಡು ವರ್ಷದಿಂದ ಯಾವುದೇ ಅನುದಾನ ಇಲ್ಲದಿದ್ದರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಕೊಡಗು ವಿ.ವಿ. ಪರಿಸ್ಥಿತಿ ಈಗ ತ್ರಿಶಂಕು ಸ್ಥಿತಿಯಲ್ಲಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸದಾಗಿ ಸುಮಾರು 10 ವಿ.ವಿ.ಗಳನ್ನು ಆರಂಭಿಸಲಾಗಿತ್ತು. ಈ ಪೈಕಿ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟ ಉಪ ತೀರ್ಮಾನಿಸಲಾಗಿದೆ ಎಂಬ ವದಂತಿ ಇದೆ. ಆದರೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ಈ ಉಪಸಮಿತಿಯು, ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಇತ್ತೀಚೆಗೆ ಮೊದಲ ಸಭೆ ನಡೆಯಿತು. ಸಭೆಯಲ್ಲಿ ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯ ಸೇರಿ ಎಲ್ಲಾ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಉಪ ಸಮಿತಿಯ ನಿರ್ಧಾರಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದರೆ, ಇದೀಗ ಪಟ್ಟಿ ಮಾಡಲಾಗಿರುವ 9 ಹೊಸ ವಿಶ್ವ ವಿದ್ಯಾಲಯಗಳು ಬಂದ್ ಆಗಲಿದೆ. ಇದರಿಂದ ಪ್ರತ್ಯೇಕವಾಗಿದ್ದ ಕೊಡಗು ವಿಶ್ವ ವಿದ್ಯಾನಿಲಯ ಮತ್ತೆ ಮಂಗಳೂರು ವಿಶ್ವ ವಿದ್ಯಾನಿಲಯದೊಂದಿಗೆ ವಿಲೀನವಾಗುವ ಸಾಧ್ಯತೆಯಿದೆ.
ಬಿಜೆಪಿ ಸರ್ಕಾರ ಅವಧಿಯಲ್ಲಿ ಹೊಸ ವಿ.ವಿ.ಗಳು ಸ್ಥಾಪನೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷವಾದರೂ ಅನುದಾನ ನೀಡುತ್ತಿಲ್ಲ. ಬದಲಾಗಿ ಇದೀಗ ಹೊಸ ವಿವಿಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿಯ ಆರೋಪವಾಗಿದೆ.
ಆದರೆ ಬಿಜೆಪಿ ಸರ್ಕಾರ ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ವಿಶ್ವ ವಿದ್ಯಾಲಯಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದೆ ಹಾಗೂ ಮೂಲಸೌಕರ್ಯ ಒದಗಿಸದೆ ತರಾತುರಿಯಲ್ಲಿ ಹೊಸ ವಿ.ವಿ.ಗಳನ್ನು ಘೋಷಣೆ ಮಾಡಿದೆ ಎಂಬುದು ಈಗಿನ ಕಾಂಗ್ರೆಸ್ ಸರ್ಕಾರದ ಆರೋಪ.
ವಿಶ್ವ ವಿದ್ಯಾಲಯಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದಿರುವುದರಿಂದ ಕಳೆದ ಎರಡು ವರ್ಷದಿಂದ ಕೊಡಗು ವಿ.ವಿ. ಸೇರಿದಂತೆ ರಾಜ್ಯದ ಏಳು ವಿವಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ತೀರಾ ಸಮಸ್ಯೆಯಾಗಿದೆ. ಹೀಗಿದ್ದರೂ ಕೊಡಗು ವಿವಿ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ.
ವಿಶ್ವ ವಿದ್ಯಾಲಯಗಳ ಕಾರ್ಯಾಚರಣೆಗೆ 100-200 ಎಕರೆ ಜಾಗದ ಅವಶ್ಯಕತೆಯಿದೆ. ಅಲ್ಲದೆ ಮೂಲ ಸೌಕರ್ಯ ವ್ಯವಸ್ಥೆಯೂ ಬೇಕಾಗಿದೆ ಎಂದು ಸಂಪುಟ ಉಪ ಸಮಿತಿ ತಿಳಿಸಿದೆ. ಆದರೆ ಕಳೆದ ಎರಡು ವರ್ಷದಿಂದ ಕೊಡಗು ವಿಶ್ವ ವಿದ್ಯಾನಿಲಯ ಸರ್ಕಾರದ ಅನುದಾನದ ನಡುವೆಯೂ ಉತ್ತಮವಾಗಿ ಕಾರ್ಯಚರಿಸುತ್ತಿದೆ. ಅಲ್ಲದೆ ವಿ.ವಿ.ಗೆ ಸುಮಾರು 71 ಎಕರೆ ಪ್ರದೇಶ ಜಾಗವಿದೆ. ಅಲ್ಲದೆ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯಚರಿಸುತ್ತಿದೆ. ಹೀಗಿದ್ದರೂ ಕೊಡಗು ವಿವಿಯನ್ನು ಮುಚ್ಚುವ ನಿರ್ಧಾರ ಸರಿಯಲ್ಲ ಎಂಬುದು ಪ್ರಮುಖರ ಅಭಿಪ್ರಾಯವಾಗಿದೆ.
ಎರಡು ವರ್ಷವಾಯ್ತು: 2023 ಮಾ.28ರಂದು ಕೊಡಗು ವಿಶ್ವ ವಿದ್ಯಾಲಯ ಅಧಿಕೃತವಾಗಿ ಆರಂಭವಾಯಿತು. ಕುಶಾಲನಗರದ ತಾಲೂಕಿನ ಚಿಕ್ಕಅಳುವಾರದ ಪಿಜಿ ಕೇಂದ್ರವನ್ನು ಕೊಡಗು ವಿಶ್ವ ವಿದ್ಯಾಲಯವಾಗಿ ಅಂದಿನ ಬಿಜೆಪಿ ಸರ್ಕಾರ ಮಾಡಿತ್ತು. ಜಿಲ್ಲೆಯ ಸುಮಾರು 20ಕ್ಕೂ ಅಧಿಕ ಕಾಲೇಜುಗಳು ಕೊಡಗು ವಿ..ವಿಯ ವ್ಯಾಪ್ತಿಯಲ್ಲಿ ಕಾರ್ಯಚರಿಸುತ್ತಿವೆ. ಅಲ್ಲದೆ ಕೊಡಗು ವಿ.ವಿ.ಗೆ ಯುಜಿಸಿಯಿಂದ ಅಧಿಕೃತವಾದ ಮಾನ್ಯತೆಯೂ ದೊರಕಿದೆ. ಕುಲಪತಿಗಳಾಗಿ ಪ್ರೊ ಅಶೋಕ ಸಂಗಪ್ಪ ಆಲೂರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೊಡಗು ಬಂದ್ ಎಚ್ಚರಿಕೆ ನೀಡಿದ ರಂಜನ್!
ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಮಾಡಿದ್ದೆವು. ಆದರೆ ಈಗಿನ ಸರ್ಕಾರ ಇದೀಗ ವಿ.ವಿ.ಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ. ಇವರು ಉಚಿತ ಯೋಜನೆಗಳಿಗೆ ರಾಜ್ಯದ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಆದರೆ ವಿಶ್ವ ವಿದ್ಯಾಲಯಕ್ಕೆ ಕನಿಷ್ಠ ಮೂರು ಕೋಟಿ ಅನುದಾನ ನೀಡಲು ಹಣವಿಲ್ಲವೇ? ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರ್ಕಾರ ಹಣ ನೀಡಲು ಸಾಧ್ಯವಿಲ್ಲ ಎಂದ ಮೇಲೆ ಈ ಸರ್ಕಾರ ಇರಬೇಕಾ? ಕೊಡಗು ವಿಶ್ವ ವಿದ್ಯಾಲಯ ಮುಚ್ಚಿದರೆ ಕೊಡಗು ಬಂದ್ ಮಾಡಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊಡಗು ವಿಶ್ವ ವಿದ್ಯಾನಿಲಯದ ಬಗ್ಗೆ ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ತಾನು ಕೊಡಗು ವಿ.ವಿ. ಮುನ್ನಡೆಸಲು ಹಲವು ಸಂಸ್ಥೆಗಳೊಂದಿಗೆ ಸಿಎಸ್‌ಆರ್ ನಿಧಿ ನೀಡುವಂತೆ ಈಗಾಗಲೇ ಮಾತುಕತೆ ನಡೆಸಿದ್ದು, ಸಿಗುವುದು ಖಚಿತವಾಗಿದೆ. ಆದ್ದರಿಂದ ವಿ.ವಿ. ಯಥಾ ಸ್ಥಿತಿಯಲ್ಲಿ ಮುಂದುವರಿಯಲಿ ಎಂದು ರಂಜನ್ ಆಗ್ರಹಿಸಿದ್ದಾರೆ.
ಕೊಡಗು ವಿಶ್ವ ವಿದ್ಯಾನಿಲಯ ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೆಗೆದುಕೊಂಡಿರುವ ನಿರ್ಧಾರದ ಆದೇಶ ಪ್ರತಿ ದೊರಕಿಲ್ಲ. ಆದೇಶವನ್ನು ಪರಿಶೀಲಿಸಿ ನಂತರ ತನ್ನ ನಿರ್ಧಾರವನ್ನು ತಿಳಿಸುತ್ತೇನೆ. ಕೊಡಗು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.