ಕನ್ನಡಪ್ರಭ ವಾರ್ತೆ ಮಡಿಕೇರಿ
ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ 2 ಪಂದ್ಯಾವಳಿ ಏ.1 ರಿಂದ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.ಟಿ-20 ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸೀಸನ್ 1 ರ ಪ್ರಾಂಚೈಸಿಗಳು ಮುಂದುವರೆಯಲಿದ್ದು, ಇವರೊಂದಿಗೆ ಮತ್ತಷ್ಟು ಪ್ರಾಂಚೈಸಿಗಳು ಪಾಲ್ಗೊಳ್ಳಲಿದ್ದಾರೆ. ಕ್ಯಾಶ್ ಬಿಡ್ಡಿಂಗ್ ಮೂಲಕ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇತ್ತೀಚೆಗೆ ಮೈಸೂರಿನ “ದಿ ರೂಸ್ಟ್” ಹೊಟೇಲ್ ಸಭಾಂಗಣದಲ್ಲಿ ನಡೆಯಿತು. 10 ಪ್ರಾಂಚೈಸಿಗಳು 175 ಆಟಗಾರರ ಆಯ್ಕೆಯಲ್ಲಿ ತೊಡಗಿಸಿಕೊಂಡರು. ಈ ಬಾರಿಯ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಣಜಿ ಆಟಗಾರರು ಹಾಗೂ ಓಮನ್ ದೇಶಕ್ಕೆ ಆಟವಾಡಿದ ಆಟಗಾರರು ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ.
ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ಅಧ್ಯಕ್ಷ ಪೊರುಕೊಂಡ ಸುನಿಲ್, ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಕ್ರಿಕೆಟ್ ಮೈದಾನದಲ್ಲಿ ಏ.1 ರಿಂದ 15 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ನೇರ ಪ್ರಸಾರ ಕೂಡ ಇರುತ್ತದೆ ಎಂದರು.ಕಳೆದ ವರ್ಷ ಮಡಿಕೇರಿಯಲ್ಲಿ ನಡೆಸಿದ ಸಿಸನ್ 1ರ ಸಫಲತೆಯನ್ನು ಪರಿಗಣಿಸಿ ಟಾಟಾ ಕಾಫಿ ಸಂಸ್ಥೆ ಸೀಸನ್ 2 ಪಂದ್ಯಾವಳಿಯನ್ನು ನಡೆಸಲು ಮೈದಾನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸಿಸನ್ 1ರ ಆಟಗಾರರೊಬ್ಬರಿಗೆ ಪ್ರತಿಷ್ಠಿತ ಸಂಸ್ಥೆಯೊಂದು ಉದ್ಯೋಗ ನೀಡಿದೆ. ಕೊಡಗಿನ ಕ್ರೀಡಾ ಪ್ರತಿಭೆಗಳು ಲೆದರ್ ಬಾಲ್ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಈ ಕಾರಣಕ್ಕಾಗಿಯೇ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತೇಜನ ನೀಡುತ್ತಿದೆ. ಕಳೆದ ಬಾರಿ 160 ಆಟಗಾರರು ಪಾಲ್ಗೊಂಡಿದ್ದು, ಈ ಬಾರಿ 175ಕ್ಕೂ ಅಧಿಕ ಕ್ರೀಡಾಪಟುಗಳು ಆಡಲಿದ್ದಾರೆ ಎಂದು ತಿಳಿಸಿದರು.
ಸೀಸನ್-2ರ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಪ್ರತಿ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಂತಿಮ ಪಂದ್ಯಾವಳಿಯಲ್ಲಿ 19 ತರಹದ ಟ್ರೋಫಿಗಳನ್ನು ನಗದು ಬಹುಮಾನದೊಂದಿಗೆ ವಿತರಿಸಲಾಗುವುದು.ಹಲವಾರು ಕ್ಲಬ್ ಗಳೊಂದಿಗೆ ಸಂಪರ್ಕದಲ್ಲಿದ್ದು, ಸೀಸನ್ 1 ರಲ್ಲಿ ನಾಲ್ವರು ಆಟಗಾರರನ್ನು ಕ್ಲಬ್ ಗಳಿಗೆ ಪರಿಚಯಿಸಲಾಗಿದೆ. ಸೀಸನ್ 2ರಲ್ಲಿ ಕೂಡ ರಾಜ್ಯ ಮತ್ತು ಹೊರ ರಾಜ್ಯದ ಕ್ಲಬ್ ಗಳಿಗೆ ಆಟಗಾರರನ್ನು ಪರಿಚಯಿಸಲಾಗುವುದು ಎಂದು ಪೊರುಕೊಂಡ ಸುನಿಲ್ ಮಾಹಿತಿ ನೀಡಿದರು.
ಫೌಂಡೇಶನ್ ನ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ ಮಾತನಾಡಿ, ಇಂದು ಲೆದರ್ ಬಾಲ್ ಕ್ರಿಕೆಟ್ ಗಿಂತ ಟೆನ್ನಿಸ್ ಬಾಲ್ ಕ್ರಿಕೆಟ್ ಹೆಚ್ಚಾಗಿ ನಡೆಯುತ್ತಿದೆ. ಪರಿಣಾಮ ಲೆದರ್ ಬಾಲ್ ಆಟಗಾರರು ವಂಚಿತರಾಗುತ್ತಿರುವುದಲ್ಲದೆ, ಇತರ ಕ್ರೀಡಾ ಪ್ರತಿಭೆಗಳು ಟೆನ್ನಿಸ್ ಬಾಲ್ ಪಂದ್ಯಾವಳಿಗೆ ಸೀಮಿತವಾಗುತ್ತಿದ್ದಾರೆ. ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಈ ಪಂದ್ಯಾವಳಿ ನಡೆಸುತ್ತಿದ್ದು, ಕೊಡಗಿನ ಕ್ರೀಡಾಪಟುಗಳಿಗೆ ಇದು ವರದಾನವಾಗಿದೆ ಎಂದು ಅಭಿಪ್ರಾಯಪಟ್ಟರು.ಪಂದ್ಯಾವಳಿಯ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ವ್ಯವಸ್ಥಾಪಕ ಚೆರುಮಂದಂಡ ಸೋಮಣ್ಣ, ನಿರ್ದೇಶಕರಾದ ಮಡ್ಲಂಡ ದರ್ಶನ್ ಪೆಮ್ಮಯ್ಯ, ಕೀತಿಯಂಡ ಗಣಪತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕುಲ್ಲೇಟಿರ ಶಾಂತ ಕಾಳಪ್ಪ, ಬಲ್ಲಂಡ ರೇಣ ಮತ್ತಿತರರು ಉಪಸ್ಥಿತರಿದ್ದರು.