ಕೊಡವ ಮಕ್ಕಡ ಕೂಟ 98ನೇ ಪುಸ್ತಕ ‘ಗುಳೆ’ ಬಿಡುಗಡೆ

KannadaprabhaNewsNetwork |  
Published : Oct 25, 2024, 01:03 AM IST
ಚಿತ್ರ :  24ಎಂಡಿಕೆ1 : ಕೊಡವ ಮಕ್ಕಡ ಕೂಟದ 98ನೇ ಪುಸ್ತಕ “ಗುಳೆ” ಬಿಡುಗಡೆಗೊಂಡ ಸಂದರ್ಭ.  | Kannada Prabha

ಸಾರಾಂಶ

ಕೊಡವ ಮಕ್ಕಡ ಕೂಟದ 98ನೇ ಪುಸ್ತಕ, ಲೇಖಕಿ ಡಾ.ದೀಪ ನರೇಂದ್ರ ಬಾಬು ರಚಿಸಿರುವ ‘ಗುಳೆ’ ಬಿಡುಗಡೆ ಸಮಾರಂಭ ಮಡಿಕೇರಿ ಪತ್ರಿಕಾ ಭವನದಲ್ಲಿಗುರುವಾರ ನಡೆಯಿತು. ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ದಾಖಲೆಯ 100ನೇ ಪುಸ್ತಕವನ್ನು ನ.24 ರಂದು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ.

ಕೊಡವ ಮಕ್ಕಡ ಕೂಟದ 98ನೇ ಪುಸ್ತಕ, ಲೇಖಕಿ ಡಾ.ದೀಪ ನರೇಂದ್ರ ಬಾಬು ರಚಿಸಿರುವ ‘ಗುಳೆ’ ಬಿಡುಗಡೆ ಕಾರ್ಯಕ್ರ ನಗರದ ಪತ್ರಿಕಾ ಭವನದಲ್ಲಿ ನಡೆದಿದ್ದು, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡವ ಮಕ್ಕಡ ಕೂಟದ ದಾಖಲೆಯ 100ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಸಂಪಾದಕತ್ವದ ‘ನೂರನೆ ಮೊಟ್ಟ್’ ನಗರದ ಪತ್ರಿಕಾ ಭವನದಲ್ಲಿ ಬೆಳಗ್ಗೆ 11ಕ್ಕೆ ಬಿಡುಗಡೆಯಾಗಲಿದ್ದು, ಇದರೊಂದಿಗೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋದಾ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ ತಿಳಿಸಿದರು.

ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 98 ಕೃತಿಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿವೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಕೊಡಗಿಗೆ ಕಾರ್ಮಿಕರಾಗಿ ವಲಸೆ ಬರುವವರ ಜೀವನ ಅಧ್ಯಯನ ನಡೆಸಿ ವಿಶ್ಲೇಷಣೆ ಮಾಡಿದ್ದಾರೆ ಎಂದರು.

ಪುಸ್ತಕದ ಲೇಖಕಿ ಡಾ.ದೀಪ ನರೇಂದ್ರ ಬಾಬು ಮಾತನಾಡಿ, ಗುಳೆ ಎನ್ನುವುದು ಆಳವಾದ ವಿಚಾರ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ವಲಸೆ ಹೊದವರು. ವಿಜ್ಞಾನ, ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಎಲ್ಲಿ ಅವಕಾಶಗಳಿದೆ ಅಲ್ಲಿಗೆ ವಲಸೆ ಹೋಗುವಂತಾಗಿದೆ. ಆಧುನಿಕತೆ ಬೆಳೆದಂತೆ ಹಿಂದಿನ ಪದಬಳಕೆಗಳು ಮರೆಯಾಗುತ್ತಿದ್ದು, ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪುಸ್ತಕಕ್ಕೆ ಗುಳೆ ಎಂಬ ಹೆಸರಿಡಲಾಗಿದೆ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಪುಸ್ತಕವಾಗಿದ್ದು, ಇದರಲ್ಲಿ ಬರುವ ಪಾತ್ರಗಳು ಇತಿಹಾಸದ ಅರಿವನ್ನು ಮೂಡಿಸುತ್ತದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಕನ್ನಡಕ್ಕೆ ಕೊಟ್ಟ ಕೊಡುಗೆ ಎಂದರು.

ಕೊಡವ ಮತ್ತು ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದು, ಮತ್ತಷ್ಟು ಹೊಸ ಪ್ರತಿಭೆಗಳು ಹೊರಬರುವಂತಾಗಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ