ಕೊಡವ ಮುಸ್ಲಿಮರ ಇತಿಹಾಸ ಸಂಶೋಧನಾ ವಿಷಯವಾಗಲಿ

KannadaprabhaNewsNetwork |  
Published : Nov 16, 2026, 02:30 AM IST
ಚಿತ್ರ :  15ಎಂಡಿಕೆ1 : ಸಾಧಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026 ವಿತರಣೆ

ವಿರಾಜಪೇಟೆ: 18ನೇ ಶತಮಾನದಲ್ಲಿ ಉಂಟಾದ ವಿಶಿಷ್ಟವಾದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿ ರೂಪುಗೊಂಡ ಕೊಡವ ಮುಸ್ಲಿಂ ಸಮುದಾಯ ಕೊಡಗಿನ ಎಲ್ಲಾ ಜನಾಂಗಗಳೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದೆ. ಅದರಲ್ಲೂ ಈ ಸಮುದಾಯದ ಪ್ರಾತಿನಿಧಿಕ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿಯೇಷನ್ ಇಲ್ಲಿನ ಕೊಡವ ಮತ್ತು ಕೊಡವ ಮುಸ್ಲಿಂ ಸಮುದಾಯಗಳ ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಲೇಖಕರಾಗಿರುವ ಎಂ. ಎ. ಮಹಮ್ಮದ್ (ಶಶಿಪ್ರಿಯ) ಅಭಿಪ್ರಾಯ ಪಟ್ಟಿದ್ದಾರೆ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026 ವಿತರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಸಾಂಪ್ರದಾಯಿಕ ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪೋಷಕರು ಯಾವ ಉದ್ದೇಶಕ್ಕಾಗಿ ನಮ್ಮನ್ನು ಓದಿಸುತ್ತಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಶಿಕ್ಷಣದ ನಿಜವಾದ ಅರ್ಥವನ್ನು ಅರಿತುಕೊಳ್ಳಬೇಕು ಎಂದರು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ರಾಜ್ಯ ಪೊಲೀಸ್ ಇಲಾಖೆಯ ಸಿಐಡಿ ವಿಭಾಗದ ಡಿಟೆಕ್ಟಿವ್ ಪೋಲಿಸ್ ಇನ್ಸ್ಪೆಕ್ಟರ್ ಕುಪ್ಪೋಡಂಡ ಎ. ರಫೀಕ್, ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟವಾದ ಗುರಿ ಇರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ನಾವು ಉತ್ತಮ ಮಾನವರಾಗಿ ರೂಪುಗೊಳ್ಳಲು ನೈತಿಕ ಶಿಕ್ಷಣದ ಅಗತ್ಯವಿದೆ ಎಂದರು.

ಸಮಾಜದಲ್ಲಿ ನೀತಿ ಶಿಕ್ಷಣ ಕುಸಿಯುತ್ತಿದೆ:

ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಧ್ಯಾಯರಾದ ಕಿಕ್ಕರೆ ಎ. ಉಮ್ಮರ್ ಮಾಸ್ಟರ್ ಮಾತನಾಡಿ, ಸಂಪಾದಿಸುವ ಹಣ, ಆಸ್ತಿ ಚರಾಸ್ತಿಯಾದರೆ, ನಾವು ಕಲಿಯುವ ವಿದ್ಯೆ ಎಂಬುದು ನಮ್ಮ ಜೊತೆಗೇ ಬರುವ ಶಾಶ್ವತವಾದ ಸ್ಥಿರಾಸ್ತಿಯಾಗಿದೆ. ಚರಾಸ್ತಿಯನ್ನು ಯಾರು ಬೇಕಾದರೂ ಕಸಿದುಕೊಳ್ಳಬಹುದು. ಆದರೆ ಸ್ಥಿರಾಸ್ತಿಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ನಾಡು-ನುಡಿ ಕನ್ನಡವಾಗಿದ್ದು ಅದನ್ನು ಕಲಿಯಲೇಬೇಕು ಮತ್ತು ಕನ್ನಡದ ಅಸ್ಮಿತೆ ಎಂದಿಗೂ ಅಳಿಯಬಾರದು ಎಂದು ಉಮ್ಮರ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

2026ನೇ ಸಾಲಿನ ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ ಎಡಪಾಲದ ಕಿಕ್ಕರೆ ಎ. ಉಮರ್ ಮಾಸ್ಟರ್, ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್ಪೆಕ್ಟರ್ ಮೀನಕ್ಕೆರ ಎ. ಮಹಮ್ಮದ್ (ಶಶಿಪ್ರಿಯ) ಮತ್ತು ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಮತ್ತು ಇದೇ ವರ್ಷ ಕೇಂದ್ರ ಸರ್ಕಾರದಿಂದ ಹಜ್ಜ್ ಸೂಪಡೇಂಟ್ ಆಗಿ ಆಯ್ಕೆಗೊಂಡಿದ್ದ ಸಿಐಡಿ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಕುಪ್ಪೋಡಂಡ ಎ. ರಫೀಕ್ ಅವರನ್ನು ಸಮುದಾಯದ ಸಾಧಕರೆಂದು ಪರಿಗಣಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಗೆ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ನಿರ್ದೇಶಕರಾದ ಕುಪ್ಪೋಡಂಡ ಎ. ರಶೀದ್ ಅವರಿಗೆ ಸಂಸ್ಥೆ ವತಿಯಿಂದ ರೋಲಿಂಗ್ ಪಾರಿತೋಷಕ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ, ಕೋಳುಮಂಡ ರಫೀಕ್ ಮೊದಲಾದವರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಕೆ. ಎಂ. ಎ. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮತ್ತು ದುದ್ದಿಯಂಡ ಮುಸ್ಕಾನ್ ಸೂಫಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಆಲೀರ ಎಂ. ರಶೀದ್ ವಂದಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌