ಮಡಿಕೇರಿ: ಕೊಡವರ ಹೊಸವರ್ಷ ಎಡಮ್ಯಾರ್ ಮಾಸಿಕ ಸ್ಮರಣಾರ್ಥ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಹಿರಿಯರಿಗೆ ಪುಷ್ಪನಮನ ಸಲ್ಲಿಸಿತು. ಕೊಡವ ನರಮೇಧ ದುರಂತ ಹತ್ಯಾಕಾಂಡ ಸ್ಮಾರಕ ಸ್ಥಳ ದೇವಟ್ ಪರಂಬುವಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಭೇಟಿ ನೀಡಿದ ಸದಸ್ಯರು ಹಿರಿಯರನ್ನು ಸ್ಮರಿಸಿ ಪುಷ್ಪನಮನ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ವೆನಿಸ್ ಚಾರ್ಟರ್ 1964ರ ವಿಧಿ 7 ಮತ್ತು ಭಾರತೀಯ ಸಂವಿಧಾನದ ವಿಧಿ 49ರ ಅಡಿಯಲ್ಲಿ ದೇವಟ್ ಪರಂಬ್ ಹತ್ಯಾಕಾಂಡ ಸ್ಥಳದಲ್ಲಿ ಅಂತಾರಾಷ್ಟ್ರೀಯ ಕೊಡವ ಜನಾಂಗೀಯ ಹತ್ಯಾಕಾಂಡ ಸ್ಮಾರಕವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ದೇವಟ್ ಪರಂಬ್ ದುರಂತ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕು. ಸೂಕ್ಷ್ಮ, ಏಕ-ಜನಾಂಗೀಯ, ಆದಿಮಸಂಜಾತ, ಅನಿಮಿಸ್ಟಿಕ್ ನಂಬುಗೆಯ, ಪ್ರಕೃತಿಯನ್ನು ಆರಾಧಿಸುವ ಕೊಡವ ಯೋಧ ಕುಲಕ್ಕೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕು. ಕೊಡವ ಯೋಧ ಕುಲವನ್ನು ಭಾರತೀಯ ಸಂವಿಧಾನದ ಬುಡಕಟ್ಟು ಪಟ್ಟಿಗೆ ಸೇರ್ಪಡೆಗೊಳಿಸಬೇಕು.ವಿಶ್ವರಾಷ್ಟ್ರ ಸಂಸ್ಥೆಯ ಆದಿಮಸಂಜಾತ ಜನರ ಆಸ್ತಿ ಮರುಪಡೆಯುವಿಕೆ ಕಾನೂನಿನ ಅಡಿಯಲ್ಲಿ ಕೊಡವರ ವಂಶಪಾರಂಪರ್ಯ ಆಸ್ತಿಗಳನ್ನು ಮರಳಿ ಕೊಡವರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಹತ್ಯಾಕಾಂಡ: ಹೊರಗಿನ ಆಡಳಿತಗಾರರು ಮತ್ತು ಟಿಪ್ಪು-ಹೈದರ್ ಆಡಳಿತದ ನಡುವಿನ ಮೈತ್ರಿಯೇ ಕೊಡವ ಜನಾಂಗೀಯ ಹತ್ಯಾಕಾಂಡಕ್ಕೆ ಮೂಲ ಕಾರಣವಾಗಿದೆ. ಏಕ-ಜನಾಂಗೀಯ, ಆದಿಮಸಂಜಾತ ಕೊಡವ ಯೋಧ ಕುಲವು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದ ವಿರುದ್ಧ ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿ ಕೋಟೆಯಲ್ಲಿ 31ಕ್ಕೂ ಹೆಚ್ಚು ಬಾರಿ ಹೋರಾಡಿ, ನಾಲ್ಕೂ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಭಾಗವಹಿಸಿ ಕೊಡಗು ರಾಜ್ಯವನ್ನು ರಕ್ಷಿಸಿದ್ದರು. ಪದೇ ಪದೇ ಸೋಲನ್ನು ಅನುಭವಿಸಿದ್ದಕ್ಕೆ ಪ್ರತೀಕಾರವಾಗಿ, ಟಿಪ್ಪು ದೇವಟ್ ಪರಂಬುವಿನಲ್ಲಿ ಮೋಸದ ಶಾಂತಿ ಒಪ್ಪಂದದ ಮೂಲಕ ಆದಿಮಸಂಜಾತ ಕೊಡವ ಜನಾಂಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಂಚು ಹೂಡಿದನು. ಇದು ಅತ್ಯಂತ ದುರಂತ ಘಟನೆ ಎಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು.