ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಸಮುದಾಯ ಅತ್ಯಂತ ಚಿಕ್ಕ ಸಮುದಾಯವಾಗಿದ್ದು, ಕೊಡವ ಜನಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.ಕೊಡವ ಕುಟುಂಬ ತಂಡಗಳ ನಡುವಿನ ಮುದ್ದಂಡ ಕಪ್ ಹಾಕಿ ಉತ್ಸವದ ಸೆಮಿಫೈನಲ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ಕೊಡವ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನಾದರು ಹೊಂದುವ ಮೂಲಕ ಕೊಡವ ಜನಾಂಗದ ಅಭ್ಯುದಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಕೊಡಗಿನ 1176 ಕೊಡವ ಕುಟುಂಬಗಳ ಪೈಕಿ 396 ಕುಟುಂಬ ತಂಡಗಳು ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಹಾಕಿ ಉತ್ಸವದೊಂದಿಗೆ ಸಮುದಾಯದ ಸಂಘಟನೆಯೊಂದಿಗೆ, ಕೊಡಗಿನ ಉಜ್ವಲ ಭವಿಷ್ಯಕ್ಕಾಗಿ ಇತರ ಎಲ್ಲಾ ಸಮಾಜ ಬಾಂದವರೊಂದಿಗೆ ಸೌಹಾರ್ದತೆಯಿಂದ ಮುನ್ನಡೆಯೋಣವೆಂದು ತಿಳಿಸಿದರು.ಮುದ್ದಂಡ ಕಪ್ ಹಾಕಿ ಉತ್ಸವದ ಗೌರವಾಧ್ಯಕ್ಷ ಮುದ್ದಂಡ ದೇವಯ್ಯ ಅವರು ಮಾತನಾಡಿ, ಬೆಳ್ಳಿ ಹಬ್ಬದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಉತ್ಸವದ ಆರಂಭದಲ್ಲೆ ಮ್ಯಾರಥಾನ್ ಮೂಲಕ, ಇಲ್ಲಿಯವರೆಗೆ ಉತ್ಸವವನ್ನು ಆಯೋಜಿಸಿದ ಕುಟುಂಬಗಳ ಐನ್ ಮನೆಗಳಿಗೆ ಕ್ರೀಡಾ ಜ್ಯೋತಿಯೊಂದಿಗೆ ತೆರಳಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವ ಕಾರ್ಯ ಮಾಡಲಾಗಿದೆ. ಮಹಿಳಾ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದು, 58 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಗಣತಿಯಲ್ಲಿ ಕೊಡವ ಸಮುದಾಯದವರ ಸಂಖ್ಯೆಯನ್ನು 93 ಸಾವಿರವೆಂದು ಉಲ್ಲೇಖಿಸಲಾಗಿದೆ. ಇದನ್ನು ನಾವು ಒಪ್ಪಲಾಗುವುದಿಲ್ಲವೆಂದು ತಿಳಿಸಿದ ದೇವಯ್ಯ ಅವರು, ಕೊಡವ ಕುಟುಂಬಗಳು ನಮಗೊಬ್ಬ ಮಗ ಇಲ್ಲವೆ, ಮಗಳು ಸಾಕು ಎನ್ನುವ ಭಾವನೆಯನ್ನು ಬಿಡಬೇಕೆಂದು ಮನವಿ ಮಾಡಿದರು.ಉದ್ಘಾಟನಾ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮುದ್ದಂಡ ಪಟ್ಟೆದಾರ ಡಾಲಿ ತಿಮ್ಮಯ್ಯ, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಕಾರ್ಯದರ್ಶಿ ಆದ್ಯ ಪೂವಣ್ಣ, ಉಪಾಧ್ಯಕ್ಷ ಡೀನ್ ಬೋಪಣ್ಣ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ, ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.