ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಮಾಜಿ ಸೈನಿಕರು ನಿರ್ಮಿಸಿದ ಅಮರ್ ಜವಾನ್ ಪುತ್ಥಳಿಗೆ ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಮಾಲಾರ್ಪಣೆ ಮಾಡಿದ ನಂತರ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಪ್ರಾರ್ಥನೆ ಸಲ್ಲಿಸಿ ನೆಲ್ಲಕ್ಕಿಗೆ ಅಕ್ಕಿ ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ನಂತರ ತಳಿಯಕ್ಕಿ ಬೊಳಕ್‌ನೊಂದಿಗೆ ಶಿಸ್ತುಬದ್ಧವಾಗಿ ಹೊರಟ ಪಾದಯಾತ್ರೆ, ನಂತರ ಒಂಟಿಯಂಗಡಿಯ ಇತಿಹಾಸ ಪ್ರಸಿದ್ಧ ಪೆರುಮಾಳ್ ಪಟ್ಟಿ ದೇವನೆಲೆಯಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಶುಭಕೋರಲಾಯಿತು.ಸಂಭ್ರಮ ಮಹಿಳಾ ಸಂಘ ಸೇರಿದಂತೆ ಮಚ್ಚಮಾಡ ಕುಟುಂಬ, ತುಪ್ಪನಾಣಿ ಭಗವತಿ ದೇವಸ್ಥಾನ, ಹೈಸೊಡ್ಲೂರ್ ಗ್ರಾಮಸ್ಥರು, ಸ್ವಾಗತಿಸಿ ತಂಪು ಪಾನಿಯ, ಲಘು ಫಲಾಹಾರ ನೀಡಿದರೆ, ಹುದಿಕೇರಿ ಮತ್ತು ಕೋಣಂಗೇರಿ ಗ್ರಾಮಸ್ಥರು ಸ್ವಾಗತಿಸಿ, ಅಲ್ಲಿನ ಕೊಡವ ಸಮಾಜದಲ್ಲಿ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು. ಹುದಿಕೇರಿ 7ನೇ ಮೈಲ್‌ನಲ್ಲಿ ತೀತೀರ ಕುಟುಂಬ ಎಲ್ಲರಿಗೂ ಐಸ್ ಕ್ರೀಮ್ ನೀಡುವ ಮೂಲಕ ಬಿಸಿಲ ಬೇಗೆಯಿಂದ ತತ್ತರಿಸಿದ ಮಂದಿಗೆ ತಂಪು ನೀಡಿದರು.
ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆ ಹಾಗೂ ಸಮಾಜಗಳ ಅದ್ದೂರಿಯ ಸ್ವಾಗತದೊಂದಿಗೆ ನಡೆದ ಎರಡನೇ ದಿನದ ಪಾದಯಾತ್ರೆಯನ್ನು ಪೊನ್ನಂಪೇಟೆ ಕೊಡವ ಸಮಾಜ ಅದ್ದೂರಿಯ ಸ್ವಾಗತ ನೀಡುವ ಮೂಲಕ ಕೊನೆಗೊಂಡಿತು. ಮಂಗಳವಾರದ ಪಾದಯಾತ್ರೆ ಸರಿಯಾಗಿ ಬೆಳಗ್ಗೆ 9.30ಕ್ಕೆ ಪೊನ್ನಂಪೇಟೆ ಕೊಡವ ಸಮಾಜದಿಂದ ಪ್ರಾರಂಭಗೊಂಡು ಗೋಣಿಕೊಪ್ಪ ಮೂಲಕ ಹಾದು ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಕೊನೆಗೊಳ್ಳಲಿದೆ.--------------------ವೀಲ್ ಚೇರ್‌ನಲ್ಲಿ ಪಾದಯಾತ್ರೆಗೆ ಆಗಮಿಸಿದ ವೃದ್ಧೆ
ಹೈಸೊಡ್ಲೂರು ಗ್ರಾಮದ ಬಯವಂಡ ಸರಸ್ವತಿ ಪೂವಯ್ಯ (86) ಎಂಬವರು ನಡೆಯಲು ಆಗದ ಕಾರಣ ವೀಲ್ ಚೇರ್‌ನಲ್ಲಿ ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಟಿ-ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್‌ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.