ಉಡುಪಿ: ಇಲ್ಲಿನ ರೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಅಪರೂಪದ ಮಹಾ ರುದ್ರಯಾಗ ಮೇ 14 ರಿಂದ ಮೇ19 ರವರೆಗೆ ಸಂಪನ್ನಗೊಳ್ಳಲಿದೆ ಎಂದು ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸೇವಾಕರ್ತರು ಆಗಿರುವ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಆರೋಗ್ಯ ಶಿಬಿರ: 16 ರಂದು ಉಚಿತ ಆರೋಗ್ಯ ಶಿಬಿರ ನಡೆಯಲಿದೆ. 17 ರಂದು ಮಲ್ಪೆ ಬೀಚ್ ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಸ್ಪರ್ಧೆಗಳು ಮತ್ತು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದೆ ಮಂಗ್ಲಿ ತಮ್ಮ ಅದ್ಭುತ ಶಿವಗಾನಮೃತದಿಂದ ಭಕ್ತರನ್ನು ಪರವಶಗೊಳಿಸಲಿದ್ದಾರೆ
18ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ 100ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದ್ದು, 2000 ಮಂದಿಗೆ ಉದ್ಯೋಗ ದೊರೆಯುವ ಭರವಸೆ ಇದೆ. ಮೇ 19 ರಂದು ಮಹಾ ರುದ್ರ ಯಾಗ ಕೊನೆಯ ದಿನದಂದು ಪೂರ್ಣಾಹುತಿ ನಡೆಯಲಿದೆ.ಸ್ಥಳೀಯ ಕಲಾವಿದರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿದಿನ ಸಂಜೆ 5ರಿಂದ 8ರವರೆಗೆ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” ಎನ್ನುವ ಕಾರ್ಯಕ್ರಮ ಅಯೋಜಿಸಿದ್ದು, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರತಿನಿತ್ಯ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಅನ್ನ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿದೆ.ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಸಕ್ತರು ಮಹಾ ರುದ್ರ ಯಾಗ ಸಮಿತಿ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ದೇವಳದ ತಂತ್ರಿ ವೇಮೂ ವಾದಿರಾಜ ತಂತ್ರಿ ಪುತ್ತೂರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ, ಕೊಡವೂರು, ಯಾಗ ಸಮಿತಿ ಸಂಚಾಲಕ ತಾರಾನಾಥ ಪೂಜಾರಿ, ಸಹಸಂಚಾಲಕರಾದ ರಮೇಶ್ ತಿಂಗಳಾಯ ಮತ್ತು ನಂದಕಿಶೋರ್, ಪ್ರಮುಖರಾದ ಹರಿಯಪ್ಪ ಕೊಟ್ಯಾನ್, ಬಾಲಕೃಷ್ಣ ಕೊಡವೂರು, ಧನಂಜಯ, ವಾದಿರಾಜಡ ಸಾಲ್ಯಾನ್, ಡಾ. ವಿಜಯೇಂದ್ರ ವಸಂತ್ ಮುಂತಾದವರಿದ್ದರು, ಜನಾರ್ಧನ ಕೊಡವೂರು ಕಾರ್ಯಕ್ರಮ ಸಂಯೋಜಿಸಿದರು.