ಕನ್ನಡಪ್ರಭ ವಾರ್ತೆ ಕೊರಟಗೆರೆತಾಲೂಕಿನ ಏಕೈಕ ತೀತಾ ಜಲಾಶಯಕ್ಕೆ ದೇವರಾಯನದರ್ಗ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಜಯಮಂಗಲಿ ನದಿಯ ನೀರು ಹರಿದು ಬಂದಿದ್ದು, ತಡರಾತ್ರಿ ಕೋಡಿ ಬಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.ತಾಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಸಮೀಪ ಇರುವ ತೀತಾ ಜಲಾಶಯ ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರಲಿದೆ. ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ತಪ್ಪದೇ ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ.ತೀತಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಒಟ್ಟು ೨೫೦೦ ಎಕರೆ ವ್ಯಾಪ್ತಿ ಹೊಂದಿದೆ. ಜಲಾಶಯದ ವಿಸ್ತೀರ್ಣ ೧೭೫.೩೫ ಚ.ಕಿ.ಲೋ ಆಗಿದೆ. ಏರಿಯ ಉದ್ದ ೧೦೧೭ ಮೀ. ಮತ್ತು ೧೬.೬ ಮೀ. ಎತ್ತರವಿದೆ. ನೀರಿನ ಮಟ್ಟ ೨೮ ಅಡಿ ನೀರು ಭರ್ತಿಯಾಗಿದ್ದು, ಈ ಕೆರೆ ಕೋಡಿ ಬಿದ್ದರೆ ಚಿಕ್ಕಾವಳಿ ಕೆರೆ ಸೇರಿ ನಂತರ ಜಯಮಂಗಲಿ ನದಿ ಮೂಲಕ ಆಂಧ್ರಪ್ರದೇಶದ ಪರಗಿ ಕೆರೆ ಸೇರಿ ಅಲ್ಲಿಂದ ಸಮುದ್ರ ಸೇರಲಿದೆ.ಹೊಳವನಹಳ್ಳಿ ಹೋಬಳಿಯ ತಿಮ್ಮನಹಳ್ಳಿ, ಹೊನ್ನಾರನಹಳ್ಳಿ, ಗೊರವನಹಳ್ಳಿ ತೀತಾ, ಮಾದವಾರ, ತುಂಬಗಾನಹಳ್ಳಿ, ಚಿಕ್ಕಾವಳಿ, ರಾಜಯ್ಯನಪಾಳ್ಯ, ಕ್ಯಾಮೇನಹಳ್ಳಿ, ಬಿದಲೋಟಿ, ಕೋಡ್ಲಹಳ್ಳಿ, ವೆಂಕಟಾಪುರ ಗ್ರಾಮಗಳಿಗೆ ಸೇರಿದ ಸಾವಿರಾರು ರೈತರಿಗೆ ತೀತಾ ಜಲಾಶಯ ಜೀವನಾಡಿಯಾಗಿದೆ. ರೈತರ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ.ಬೋಟಿಂಗ್ ವ್ಯವಸ್ಥೆ ಮಾಡಿ: ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ತೀತಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದು, ಜಲಾಶಯದಲ್ಲಿ ಪ್ರವಾಸೋದ್ಯೋಮದಿಂದ ಬೋಟಿಂಗ್, ಪಾರ್ಕ್ ಹಾಗೂ ಮಕ್ಕಳುಗಳು ಆಟವಾಡಲು ಉಪಕರಣಗಳನ್ನ ಮಾಡಿದರೆ ಇನ್ನಷ್ಟು ಭಕ್ತರು ಡ್ಯಾಂಗೆ ಭೇಟಿ ನೀಡಲಿದ್ದಾರೆ.