ಜ.3ರಂದು ಶಾ ಹೇಳಿಕೆ ಖಂಡಿಸಿ ಕೋಲಾರ ಬಂದ್‌

KannadaprabhaNewsNetwork |  
Published : Dec 28, 2024, 12:46 AM IST
೨೭ಕೆಎಲ್‌ಆರ್-೯ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರಿಂದ ಜ.೩ರಂದು ಕೋಲಾರ ಬಂದ್‌ಗೆ ಕರೆ ನೀಡಿರುವ ಕುರಿತು ಜಿಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಒತ್ತಾಯಿಸಿ ದಲಿತ, ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ಕೋಲಾರ ನಗರ ಬಂದ್‌ಗೆ ಬಸ್, ಆಟೋ ಇನ್ನಿತರೆ ಚಾಲಕರು, ವರ್ತಕರು ಬೆಂಬಲ ಸೂಚಿಸಲು ಮನವಿ ಮಾಡಿ, ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಅಂದು ಶುಕ್ರವಾರ ಬೆಳಗ್ಗೆ ೬ರಿಂದ ಸಂಜೆ ೬ರ ತನಕ ಬಂದ್ ನಡೆಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಡಾ.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರಿಂದ ಜ.೩ರಂದು ಕೋಲಾರ ಬಂದ್ ಆಚರಿಸಲಾಗುವುದು ಎಂದು ಹೋರಾಟ ವೇದಿಕೆ, ದಲಿತ ಸಂಯುಕ್ತರಂಗ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ತಿಳಿಸಿದರು.ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಶೇಖರ್, ಪಂಡಿತ್ ಮುನಿವೆಂಕಟಪ್ಪ, ವಿಜಯಕುಮಾರ್ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ತಿನ ಅಧಿವೇಶನದಲ್ಲಿ ಚರ್ಚೆ ವೇಳೆ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ಗೆ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆ. ಅವರನ್ನು ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಬಂದ್‌ ಬೆಂಬಲಿಸಲು ಮನವಿ

ಜ.೩ ರಂದು ಕೋಲಾರ ಜಿಲ್ಲಾ ಕೇಂದ್ರ ಬಂದ್‌ಗೆ ಕರೆ ನೀಡಿದ್ದು, ಈ ವಿಷಯವನ್ನು ಸರ್ಕಾರ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ಗಮನಕ್ಕೆ ತರಲಾಗಿದೆ. ಎಲ್ಲಾ ಪ್ರಗತಿಪರ ಸಂಘಟನೆಗಳು, ಬಸ್, ಆಟೋ ಇನ್ನಿತರೆ ಚಾಲಕರು, ವರ್ತಕರು ಬೆಂಬಲ ಸೂಚಿಸಲು ಮನವಿ ಮಾಡಿ, ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಅಂದು ಶುಕ್ರವಾರ ಬೆಳಗ್ಗೆ ೬ರಿಂದ ಸಂಜೆ ೬ರ ತನಕ ಬಂದ್ ನಡೆಸಲಾಗುವುದು. ನಗರದ ನಚಿಕೇತನದಲ್ಲಿ ಸಂಘಟನಾಕಾರರು ಒಟ್ಟಾಗಿ ಸೇರಿ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.ದಲಿತ ಮುಖಂಡ ಚಂದ್ರಶೇಖರ್ ಮಾತನಾಡಿ, ಭಾರತ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬೇಡ್ಕರ್ ಎಲ್ಲ ವರ್ಗದ ಜನರಿಗೆ ಘನತೆ ಹಾಗೂ ಸಮಾನತೆ ಖಾತ್ರಿ ಪಡಿಸಿದ್ದರು. ಅವರ ಕೊಡುಗೆಗಳನ್ನು ದುರ್ಬಲಗೊಳಿಸುವ ಯಾವುದೇ ಹೇಳಿಕೆ ಅವರಿಗೆ ಅಲ್ಲದೇ ಸಂವಿಧಾನಕ್ಕೆ ಮಾಡುವ ಅವಮಾನ ಆಗಿದೆ. ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ಗೆ ಅವಮಾನ

ದಲಿತ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಎಲ್ಲರಿಗೂ ಮಾದರಿ ಆಗಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಂಬೇಡ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ನೀಡಿದ್ದ ಸಂವಿಧಾನದಿಂದಲೇ ಅಧಿಕಾರ ಅನುಭವಿಸುತ್ತಿದ್ದು, ಈಗ ಕೀಳಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ದಲಿತ ಮುಖಂಡ ವಿಜಯಕುಮಾರ್ ಮಾತನಾಡಿ, ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವೂ ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ದೇಶದ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡುತ್ತಿದ್ಧಾರೆ ಎಂದು ಹೇಳಿದರು.ಶಾ ರಾಜೀನಾಮೆಗೆ ಒತ್ತಾಯ

ನಗರಸಭೆ ಸದಸ್ಯ ಅಂಬರೀಶ್ ಮಾತನಾಡಿ ಸಮಾನತೆ, ನ್ಯಾಯ, ಮತ್ತು ಸಂವಿಧಾನದ ಮೇಲೆ ನಂಬಿಕೆ ಹೊಂದಿರುವ ಪ್ರತಿಯೊಬ್ಬರೂ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ ಅವರು ಕೋಲಾರ ಬಂದ್ ಗೆ ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರು ಬೆಂಬಲ ಸೂಚಿಸಬೇಕು ಎಂದರು.ಸಚಿವ ಶಾ ಕ್ಷಮೆ ಯಾಚಿಸಲಿ

ಕೆ.ಎಂ.ಡಿ.ಸಿ ನಿರ್ದೇಶಕ ಅಬ್ದುಲ್ ಖುಯ್ಯುಂ ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕು. ಬಿಜೆಪಿ ಮತ್ತು ಸಂಘ ಪರಿವಾರ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಒಳಸಂಚನ್ನು ದೇಶದಿಂದ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚಂದ್ರಮೌಳಿ, ಡಿಪಿಎಸ್ ಮುನಿರಾಜು, ದಲಿತ ನಾರಾಯಣಸ್ವಾಮಿ, ಅಬ್ಬಣಿ ಶಿವಪ್ಪ, ಪಿವಿಸಿ ಕೃಷ್ಣಪ್ಪ, ಖಾದ್ರಿಪುರ ಬಾಬು, ಕುರಿಗಳ ರಮೇಶ್, ರಾಮಯ್ಯ, ವರದೇನಹಳ್ಳಿ ವೆಂಕಟೇಶ್, ಸಂದೇಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ