ಕೋಲಾರ ಅಭಿವೃದ್ಧಿ ಗುದ್ದಲಿ ಪೂಜೆ, ಪ್ರಚಾರಕ್ಕೆ ಸೀಮಿತ

KannadaprabhaNewsNetwork | Published : Jan 12, 2025 1:20 AM

ಸಾರಾಂಶ

ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಸಣ್ಣಪುಟ್ಟ ಅಭಿವೃದ್ದಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಲು ಅನುಮತಿ ನೀಡುತ್ತಿಲ್ಲ, ಗುದ್ದಲಿ ಪೂಜೆಗಳನ್ನು ಕೇವಲ ಸರ್ಕಾರದ ಉಳಿವಿಗಾಗಿ ಅಸ್ತ್ರವನ್ನಾಗಿ ಬಳಸಿಕೊಂಡು ಸಾರ್ವಜನಿಕರನ್ನು ಯಾಮಾರಿಸಲಾಗುತ್ತಿದೆ. ಕೆ.ಸಿ.ವ್ಯಾಲಿ ನೀರಿನಿಂದ ಮಣ್ಣಿನ ಆರೋಗ್ಯ ಹದಗೆಟ್ಟು ರಾಸಾಯನಿಕ ಮಿಶ್ರಿತ ವಿಷಮಯವಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಉಸ್ತುವಾರಿ ಸಚಿವರ ಇಚ್ಚಾ ಕೊರತೆಯಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿಗಳಾಗದೆ ಮರೀಚೆಕೆಯಾಗಿದೆ, ಭರವಸೆಗಳೆಲ್ಲಾ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ, ಕೋಟ್ಯಾಂತರ ರೂಪಾಯಿ ಕಾಮಗಾರಿಗಳ ಗುದ್ದಲಿ ಪೂಜೆಗಳು ನಡೆಯುತ್ತಿರುವ ಬಗ್ಗೆ ಪೋಟೋಗಳ ಸಮೇತ ಪುಕ್ಕಟೆ ಪ್ರಚಾರವಾಗುತ್ತಿದೆ, ಆದರೆ ಕನಿಷ್ಠ ಒಂದು ಕೋಟಿ ರುಪಾಯಿ ಬಿಡುಗಡೆ ಮಾಡಿರುವ ದಾಖಲೆ ಪ್ರದರ್ಶಿಸಲಿ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಸವಾಲು ಹಾಕಿದರು.ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಆರ್ಥಿಕ ಇಲಾಖೆಯಲ್ಲಿ ಸಣ್ಣಪುಟ್ಟ ಅಭಿವೃದ್ದಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಲು ಅನುಮತಿ ನೀಡುತ್ತಿಲ್ಲ, ಗುದ್ದಲಿ ಪೂಜೆಗಳನ್ನು ಕೇವಲ ಸರ್ಕಾರದ ಉಳಿವಿಗಾಗಿ ಅಸ್ತ್ರವನ್ನಾಗಿ ಬಳಸಿಕೊಂಡು ಸಾರ್ವಜನಿಕರನ್ನು ಯಾಮಾರಿಸಲಾಗುತ್ತಿದೆ ಎಂದು ಆರೋಪಿಸಿದರು. ಉಸ್ತುವಾರ ಸಚಿವರಿಗೆ ಕಾಳಜಿ ಇಲ್ಲ

ಜಿಲ್ಲಾ ಉಸ್ತುವಾರಿ ಸಚಿವರು ಹೊರಗಿನ ಜಿಲ್ಲೆಯವರಾಗಿರುವುದರಿಂದ ಉಸ್ತುವಾರಿ ನಾಮ್‌ ಕೆ ವಾಸ್ತೆ ಪಡೆದಿದ್ದು ಅಭಿವೃದ್ದಿಗೆ ಸಂಬಂಧಿಸಿದಂತೆ ಯಾವುದೇ ಕಾಳಜಿ ಇಲ್ಲ. ಜಿಲ್ಲೆಗೆ ಅವರು ಈಗಿನವರೆಗೆ ಮಾಡಿರುವ ಅಭಿವೃದ್ದಿಯ ಸಾಧನೆಯೇನು ಎಂದು ಪ್ರಶ್ನಿಸಿದ ಅವರು, ಇಂದು ರಾಜಕಾರಣಿಗಳಿಗೆ ತಂತ್ರ ಕುತಂತ್ರಗಳನ್ನು ಪ್ರಯೋಗಿಸಿ ಓಟ್‌ಬ್ಯಾಂಕ್ ಮಾಡಿಕೊಳ್ಳುವಂತ ಹುನ್ನಾರಗಳು ನಡೆಸಲಾಗುತ್ತಿದೆ ಹೊರತು ಅಭಿವೃದ್ದಿ ಎಂಬುವುದು ಶೂನ್ಯವಾಗಿದೆ ಎಂದರು.

ಲೋಟ ಕೊಟ್ಟು ಚೆಂಬು ಕಸಿದರು

ಗ್ಯಾರಂಟಿ ಯೋಜನೆಗಳೆಲ್ಲ ಲೋಟ ಕೊಟ್ಟು ಚೆಂಬು ಕಸಿಯುವಂತ ಯೋಜನೆಗಳಾಗಿದೆ, ಪತ್ನಿಗೆ ಫ್ರೀ ಎಂದು ಪತಿಯ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು, ಪತಿಯ ಜೇಬಿನಿಂದ ಕಿತ್ತು ಪತ್ನಿ ನೀಡಿದಂತಾಗಿದೆ ಎಂದು ಟೀಕಿಸಿದರು. ಕೆ.ಸಿ ವ್ಯಾಲಿ ನೀರು ಹಾನಿಕರ

ಕೆ.ಸಿ. ವ್ಯಾಲಿ ನೀರಿನ ಸೌಲಭ್ಯದಿಂದ ಪ್ರಾರಂಭದಲ್ಲಿ ಅಂತರ್ಜಲಮಟ್ಟ ಏರಿಕೆ ಕಂಡಿದ್ದು ಈಗ ಅಂತರ್ಜಲ ಮಟ್ಟ ಕುಸಿತ ಕಂಡು ಯಥಾ ಸ್ಥಿತಿಗೆ ಮರಳಿದೆ. ಕೆ.ಸಿ.ವ್ಯಾಲಿ ನೀರಿನಿಂದ ಮಣ್ಣಿನ ಆರೋಗ್ಯ ಹದಗೆಟ್ಟು ರಾಸಾಯನಿಕ ಮಿಶ್ರಿತ ವಿಷಮಯವಾಗಿ ಪರಿಣಾಮಿಸಿದೆ. ರೋಗಗಳನ್ನು ನಿಯಂತ್ರಿಸುವಂತ ಶಕ್ತಿ ಕಳೆದುಕೊಂಡಿದೆ. ತೋಟಗಾರಿಕೆಯ ಅಲ್ಪವಧಿ ಬೆಳೆಗಳ ಗುಣಮಟ್ಟ ನೆಲಕಚ್ಚಿದೆ, ರೈತರ ಬೆಳೆಗಳು ಕನಿಷ್ಟ ಒಂದೆರಡು ದಿನಗಳು ಉಳಿಸಿಕೊಳ್ಳಲು ಸಾಧ್ಯವಾಗದಂತೆ ಹಾಳಾಗುತ್ತಿವೆ, ಗುಣಮಟ್ಟ ಶೇ.೫೦ರಷ್ಟು ಇಲ್ಲವಾಗಿರುವುದು ಇದರಿಂದ ಹೊರ ರಾಜ್ಯಗಳಿಗೆ ತರಕಾರಿ ಪೂರೈಕೆ ದುಸ್ಸಾರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಪಿಎಂಸಿಗೆ ೧೦೦ ಎಕರೆ ಬೇಕು

ಕೋಲಾರದ ಎಪಿಎಂಸಿ ಏಷ್ಯಾ ಖಂಡದಲ್ಲಿಯೇ ೨ನೇ ಸ್ಥಾನದಲ್ಲಿದೆ. ಆದರೆ ಪ್ರಥಮ ಸ್ಥಾನಕ್ಕೆ ಬರಲು ಎ.ಪಿ.ಎಂ.ಸಿ.ಯಲ್ಲಿ ಸ್ಥಳವಕಾಶದ ಕೊರತೆ ಕಳೆದ ಒಂದು ದಶಕಗಳಿಂದ ರೈತರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಕೋಲಾರದ ಎ.ಪಿ.ಎಂ.ಸಿಗೆ. ಸುಮಾರು ೧೦೦ ಎಕರೆಯಷ್ಟು ಸ್ಥಳವಕಾಶದ ಅಗತ್ಯವಿದೆ. ಜಿಲ್ಲೆಯ ಕೋಲಾರದ ಎಪಿಎಂಸಿಗೆ ರೈತರು ಹೆಚ್ಚಿನ ಬೆಳೆಗಳು ಮಾರಾಟಕ್ಕೆ ತರುತ್ತಾರೆ ಎಂದರು. ಕೋಲಾರದ ಎ.ಪಿ.ಎಂ.ಸಿಗೆ ಫೆಡರೇಷನ್ ಜಾಗವು ಸ್ವಲ್ಪ ಭಾಗವಷ್ಟೆ ಬಳಕೆ ಮಾಡುತ್ತಿದ್ದು ಈ ಸಂಬಂಧವಾಗಿ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಎ.ಪಿ.ಎಂ.ಸಿ.ಯಲ್ಲಿ ರೈತರಿಗೆ, ಖರೀದಿದಾರರಿಗೆ ಅಗತ್ಯವಾದ ಕನಿಷ್ಟ ಮೂಲಭೂತ ಸೌಲಭ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್, ವಿಶ್ರಾಂತಿ ಕೊಠಡಿಗಳು ಸೇರಿದಂತೆ ಯಾವುದೇ ಸೌಲಭ್ಯಗಳೇ ಇಲ್ಲ ಎಂದರು. ಭೂಮಿಗಾಗಿ ಸರ್ಕಾರಕ್ಕೆ ಮನವಿ

ಇತ್ತೀಚೆಗೆ ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ಕರ್ನಾಟಕ ಸೇರಿದಂತೆ ಮೂರು ಗಡಿ ಭಾಗದ ರೈತರಿಗೆ ಅನುವುಂಟಾಗುವಂತೆ ಕನಿಷ್ಠ ೧೦೦ ಎಕರೆಯ ವಿಶಾಲವಾದ ಎ.ಪಿ.ಎಂ.ಸಿ. ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳವಕಾಶ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈಗಿನ ಎ.ಪಿ.ಎಂ.ಸಿಯಲ್ಲಿ ತರಕಾರಿಗಳು ವಾಹನಗಳಿಂದ ಇಳಿಸಿಕೊಳ್ಳಲು ಹಾಗೂ ತುಂಬಲು ಸ್ಥಳವಕಾಶ ಸಿಗದೆ ಸಾರ್ವಜನಿಕ ರಸ್ತೆಗಳನ್ನು ಬಳಸಿಕೊಳ್ಳುತ್ತಿರುವುದು ಅನಿವಾರ್ಯವಾಗಿದ್ದು ಇದರಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.

Share this article