ಸರ್ಕಾರಿ ಆಸ್ತಿ ರಕ್ಷಣೆಯಲ್ಲಿ ಕೋಲಾರ ನಂ ೧

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋಫೆನ್ಸಿಂಗ್ ಮಾಡುತ್ತಾರೆ

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಆಸ್ತಿಗಳೆಂದರೆ ಯಾರು ಬೇಕಾದರೂ ಒತ್ತುವರಿ ಮಾಡಬಹುದು ಮತ್ತು ಯಾರು ಕೇಳುವವರಿಲ್ಲ ಎಂಬ ಭಾವನೆ ಇದೆ. ಆದರೆ ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಇಲ್ಲ. ಈ ತಂತ್ರಾಂಶದಲ್ಲಿ ಸರ್ಕಾರಿ ಜಮೀನುಗಳ ದಾಖಲೆ ಹಾಗೂ ಜಿಯೋ ಫೆನ್ಸ್ ಮೂಲಕ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಸಿದ್ದಾರೆ. ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋಫೆನ್ಸಿಂಗ್ ಮಾಡುತ್ತಾರೆ ಎಂದು ತಿಳಿಸಿದರು.

ಆಸ್ತಿ ರಕ್ಷಣೆ ಮಾಡಲು ಬೀಟಿಂಗ್

ಈ ಆ್ಯಪ್ ಮೂಲಕ ಜಿಯೋ ಫೆನ್ಸಿಂಗ್ ಮಾಡಿ, ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಭ್ಯವಾಗುತ್ತದೆ. ಈ ಸ್ಥಳಗಳಿಗೆ ನಿಗದಿತ ಅವಧಿಯಲ್ಲಿ ಭೇಟಿ ನೀಡಲು ಯಾವ ರೀತಿ ಪೊಲೀಸ್ ಬೀಟಿಂಗ್ ವ್ಯವಸ್ಥೆ ಇರುತ್ತದೆ, ಅದೇ ರೀತಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಬೀಟಿಂಗ್ ವ್ಯವಸ್ಥೆಯನ್ನು ಆಪ್‌ನಲ್ಲಿ ಕಲ್ಪಿಸಲಾಗಿದೆ.ಆ್ಯಪ್ ಮೂಲಕ ಎಲ್ಲಾ ಸರ್ಕಾರಿ ಜಮೀನು, ಜಾಗಗಳನ್ನು ಸರ್ವೆ ಮಾಡಿ ಜಿಯೋ ಫೆನ್ಸಿಂಗ್ ಮಾಡುವ ಮೂಲಕ ದತ್ತಾಂಶ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ.ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಜಿಲ್ಲೆಗಳ ಮೌಲ್ಯ ಮಾಪನ ನಡೆಸಲಾಗುವುದು. ಸದರಿ ಮೌಲ್ಯ ಮಾಪನದಲ್ಲಿ ಈ ಬಾರಿ ಕೋಲಾರ ಜಿಲ್ಲೆಯು ಇತರ ಎಲ್ಲಾ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿದೆ ಎಂದರು.

ಶೇ. 71.71ರಷ್ಟು ಆಸ್ತಿ ದಾಖಲು

ಒಟ್ಟಾರೆ ಜಿಲ್ಲೆಯಲ್ಲಿ ೩೪೩೭೫ ಅರ್ಜಿಗಳು ಸ್ವೀಕರಿಸಿ ಶೇ ೭೧.೭೧ ರಷ್ಟು ಸರ್ಕಾರಿ ಜಮೀನು, ಕೆರೆಗಳು ಗುಂಟೆಗಳು ಗೋಮಾಳಗಳು ಮುಂತಾದ ಸರ್ಕಾರಿ ಆಸ್ತಿ ಪಾಸ್ತಿ ವಿವರಗಳನ್ನು ಆ್ಯಪ್‌ನಲ್ಲಿ ದಾಖಲಿಸಿ ರಾಜ್ಯಕ್ಕೆ ಮಾದರಿಯಾಗಿದೆ.ಇದಕ್ಕಾಗಿ ಶ್ರಮಿಸಿದ ಎಲ್ಲ ಕಂದಾಯ ಅಧಿಕಾರಿಗಳನ್ನುಅವರು ಶ್ಲಾಘಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕಾರ್ಯ ನಿರ್ವಹಿಸಿ ಜಿಲ್ಲೆಗೆ ಕೀರ್ತಿ ತರಲು ಸೂಚಿಸಿ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದಿಸಿದರು.

Share this article