ಕನ್ನಡಪ್ರಭ ವಾರ್ತೆ ಕೋಲಾರಪ್ರಜಾಪ್ರಭುತ್ವ ದೇಶದ ಅತಿದೊಡ್ಡ ಹಬ್ಬ ೧೮ನೇ ಲೋಕಸಭಾ ಚುನಾವಣೆ-೨೦೨೪ರ, ಕೋಲಾರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಶೇ.೭೮.೨೬ರಷ್ಟು ಮತ ಚಲಾವಣೆಯಾಗಿ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ.ಶುಕ್ರವಾರ ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆ ಆರಂಭದಲ್ಲಿ ತುಸು ಬಿರುಸಿನಿಂದ ಕೂಡಿತ್ತಾದರೂ ೧೦ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೂ ಸ್ವಲ್ಪ ಮಂದಗತಿಯಲ್ಲೇ ಸಾಗಿತ್ತು. ಸಂಜೆ ೪ ಗಂಟೆಯ ನಂತರ ಅತ್ಯಂತ ಬಿರುಸಿನ ಮತದಾನ ನಡೆದು ಮತದಾನದ ಅಂತಿಮಗಳಿಗೆ ಸಂಜೆ ೬ ಗಂಟೆ ವೇಳೆಗೆ ಒಟ್ಟು ಮತದಾನ ಶೇ.೭೮.೨೬ಕ್ಕೇರಿ ಕಳೆದ ೨೦೧೯ರ ಚುನಾವಣೆಗಿಂತಲೂ ಹೆಚ್ಚು ಅಂದರೆ ಶೇ.೭೮.೨೬ರಷ್ಟು ಮತ ಚಲಾವಣೆ ಮೂಲಕ ಜಿಲ್ಲೆಯ ಮತದಾರರು ದಾಖಲೆ ಸೃಷ್ಠಿಸಿದ್ದಾರೆ.
ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ನಗರದ ಹಾರೋಹಳ್ಳಿ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಸಮೀಪದ ಗಾಂಧೀನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸ್ವಗ್ರಾಮ ಕೋಲಾರದ ಕುಂಬಾರಹಳ್ಳಿಯಲ್ಲಿ ಮತ ಚಲಾಯಿಸಿದರು. ಮಾಜಿ ಸಂಸದ ಎಸ್.ಮುನಿಸ್ವಾಮಿ ತಮ್ಮ ಸ್ವಗ್ರಾಮವಾದ ಮಾಲೂರಿನ ಯಲುವಗುಳಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಮೊದಲ ಬಾರಿಗೆ ಮತದಾನ ಇದೇ ಪ್ರಥಮ ಬಾರಿಗೆ ಮತ ಚಲಾವಣೆ ಮಾಡಲು ಆಗಮಿಸಿದ್ದ ಯುವ ಮತದಾರರು ಅತ್ಯಂತ ಹೆಮ್ಮೆಯಿಂದ ತಮಗೂ ಮತದಾನ ಹಕ್ಕು ಸಿಕ್ಕಿತೆಂದು ಬೀಗಿದ್ದು ಮುಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿತ್ತು. ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿಯ ಶುಭ ಮತ ಚಲಾವಣೆ ಮಾಡಿ, ಮೊದಲ ಬಾರಿ ಮತ ಹಾಕಿದ್ದು, ಖುಷಿ ತಂದಿದೆ, ಈ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಹೆಮ್ಮೆಯಿಂದ ತಮ್ಮ ಖುಷಿಯನ್ನು ಹಂಚಿಕೊಂಡರು. ಹೊನ್ನೇನಹಳ್ಳಿಯ ರಕ್ಷಿತಾ ಮತ ಚಲಾವಣೆ ಮಾಡಿ, ನಾನು ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದು, ನನಗೆ ಹೆಮ್ಮೆ ತಂದಿದೆ, ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಎಂದು ಸಂದೇಶ ನೀಡಿದ್ದು ಗಮನ ಸೆಳೆಯಿತು. ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ನ ಅಡ್ಡಗಲ್ ಮತಗಟ್ಟೆ ಸಂಖ್ಯೆ-೩೫ ರಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತಗಟ್ಟೆಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಗಮನ ಸೆಳೆದ ಸಖಿ ಮತಗಟ್ಟೆಮಹಿಳಾ ಮತದಾರರಿಗಾಗಿಯೇ ಮಾಡಲಾಗಿರುವ ಮತಗಟ್ಟೆ ಕೋಲಾರ ನಗರದ ಮತಗಟ್ಟೆ ಸಂಖ್ಯೆ ೧೪೮ಯನ್ನು ಬಲೂನು ಹಾಗೂ ಮಹಿಳಾ ಸಿಬ್ಬಂದಿಯಿಂದ ಕೂಡಿರುವ ಪಿಂಕ್ ಬೂತ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ೪೦ ಪಿಂಕ್ ಬೂತ್‌ಗಳನ್ನು ಚುನಾವಣಾಧಿಕಾರಿಗಳು ಮಾಡಿದ್ದರು.ಒಂದು ಗಂಟೆ ಮತದಾನ ಸ್ಥಗಿತ:ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಇಬ್ಬರು ಬೂತ್ ಏಜೆಂಟ್ ಗಳ ಮತ ಕೇಳುವ ವಿಚಾರದಲ್ಲಿ ನಡುವೆ ಮಾತಿನ ಚಕಮಕಿ ನಡೆದು ಕೆಲ ಹೊತ್ತು ಮತದಾನ ಸ್ಥಗಿತಗೊಳಿಸಲಾಗಿತ್ತು. ಸುಮಾರು ಒಂದು ಗಂಟೆಗೂ ಕಾಲ ಮತದಾನ ಶ್ರೀನಿವಾಸಪುರ ತಾಲ್ಲೂಕು ಕಲ್ಲೂರು ಗ್ರಾಮದ ಮತಗಟ್ಟೆ ಸಂಖ್ಯೆ-೧೩೩ ರಲ್ಲಿ ಘಟನೆ ಈ ಘಟನೆ ನಡೆದಿದೆ. ಪೊಲೀಸರ ಮಧ್ಯ ಪ್ರವೇಶಿಸಿ ಎರಡು ಪಕ್ಷದ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಚದುರಿಸಿದ ನಂತರ ಮತ್ತೆ ಮತದಾನ ಆರಂಭವಾಯಿತು.