ಕೋಲ್ಕತಾ ವೈದ್ಯೆ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ, ಪ್ರತಿಭಟನೆ

KannadaprabhaNewsNetwork | Published : Aug 20, 2024 12:48 AM

ಸಾರಾಂಶ

ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ನೇತೃತ್ವದಲ್ಲಿ ನೂರಾರು ನರ್ಸಿಂಗ್ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ನೇತೃತ್ವದಲ್ಲಿ ನೂರಾರು ನರ್ಸಿಂಗ್ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.

ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪೈಶಾಚಿಕ ಅತ್ಯಾಚಾರ, ಕೊಲೆ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೋಲ್ಕತಾದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ವೃತ್ತಿನಿರತ ಜಾಗದಲ್ಲಿ ಮಹಿಳೆ ಎಷ್ಟರ ಮಟ್ಟಿಗೆ ಸುರಕ್ಷಿತಳು ಎಂಬ ಪ್ರಶ್ನೆ ಮೂಡಿಸಿದೆ. ಈ ಪ್ರಕರಣದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿ ಸದೆಬಡಿಯುವ ಬದಲು ಇಂತಹ ಕೃತ್ಯಗಳಲ್ಲೂ ರಾಜಕೀಯ ಹಸ್ತಕ್ಷೇಪಗಳು ಅಸಹ್ಯ ಮೂಡಿಸಿದೆ. ಇಂತಹ ಬರ್ಬರ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಪಾತಕಿಗಳನ್ನು ರಕ್ಷಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಯತ್ನಿಸಿರುವುದು ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷೆಯಿದೆ ಎಂಬುದು ಗೊತ್ತಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಐಎಂಎಸ್ಎಸ್ ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿ, ಘಟನೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಕೆಲವು ದುಷ್ಟಶಕ್ತಿಗಳು ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟಿಸುತ್ತಿದ್ದವರ ಮೇಲೆ ಏಕಾಏಕಿ ಸಮಾಜಘಾತುಕ ಶಕ್ತಿಗಳು ದಾಳಿ ನಡೆಸಿ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಹಿಂದೆ ಅಧಿಕಾರಿಗಳು ಹಾಗೂ ರಾಜಕೀಯ ವಲಯದ ಶಾಮೀಲು ಇರುವುದು ಗೊತ್ತಾಗುತ್ತಿದೆ. ಪ್ರಕರಣದ ಅಪರಾಧಿಗಳನ್ನು ಪತ್ತೆ ಹಚ್ಚಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಪರಾಧಿಗಳಿಗೆ ನಿದರ್ಶನೀಯ ಅತ್ಯುಗ್ರ ಶಿಕ್ಷೆಗೆ ಒಳಪಡಿಸಬೇಕು. ಸಾವಿಗೀಡಾದ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ವೈದ್ಯರು, ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಮತ್ತು ಅವರ ಬಂಧುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಈಶ್ವರಿ ಕೆಎಂ, ಎಐಡಿಎಸ್‌ಒನ ಈರಣ್ಣ, ಗಿರಿಜಾ, ಜಗದೀಶ್, ರವಿಕಿರಣ್, ಅಭಿಲಾಷಾ, ಶಾಂತಿ, ವಿದ್ಯಾ, ಉಮಾ, ಅನುಪಮಾ, ನಿಹಾರಿಕಾ, ಪ್ರಮೋದ್, ಸಿದ್ದು ಹಾಗೂ ನೂರಾರು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಗರದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಕಳುಹಿಸಿಕೊಟ್ಟರು.

Share this article