ಲೋಕಾಯುಕ್ತ ಕ್ರಮ । ಕಾಮಗಾರಿ ಸಂಪೂರ್ಣವಾಗಿಲ್ಲದಿದ್ದರೂ ಕೊಳ್ಳೇಗಾಲ ನಗರಸಭೆಯಿಂದ ಹಸ್ತಾಂತರ ಆರೋಪ
ಯುಜಿಡಿ (ಒಳಚರಣಡಿ) ಕಾಮಗಾರಿ ಸಂಪೂರ್ಣವಾಗಿಲ್ಲವಾದರೂ ಕೊಳ್ಳೇಗಾಲ ನಗರಸಭೆ ಅದನ್ನು ಹಸ್ತಾಂತರಿಸಿಕೊಂಡು ಕರ್ತವ್ಯಲೋಪ ಆರೋಪದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಇಲಾಖೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಒಳಗೊಂಡಂತೆ 16 ಜನರಿಗೆ ನೋಟಿಸ್ ಜಾರಿಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರಸಭೆ ಆರೋಪ ಖಂಡಿಸಿ ನಗರಸಭಾ ಸದಸ್ಯರಾದ ಜಯಮೇರಿ ಅವರು ಲೋಕಾಯುಕ್ತಕ್ಕೆ ಇತ್ತೀಚಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಕ್ರಮ ಕೈಗೊಂಡಿದೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒಳಚರಂಡಿ ಮಂಡಳಿಯಿಂದ 97.11.ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇದನ್ನು ನಗರಸಭೆಗೆ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿತ್ತು.ಇಲ್ಲಿನ ಕಾಮಗಾರಿ ಲೋಪ ಕುರಿತು ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆ ಇದನ್ನು ಮನಗಂಡ ನಗರಸಭೆ ಬಿಎಸ್ಪಿ ಸದಸ್ಯೆ ಜಯಮೇರಿ ಅವರು ಜೂ.5 ರಂದು ಲೋಕಾಯುಕ್ತಕ್ಕೆ ಐವರು ಅಧಿಕಾರಿಗಳು, ನಗರಸಭೆ ಮಾಜಿ ಅಧ್ಯಕ್ಷರು, ಸದಸ್ಯರು, ಗುತ್ತಿಗೆದಾರರು ಸೇರಿದಂತೆ 15 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಸೆ.25ರೊಳಗೆ ಪ್ರಕರಣದ ಕುರಿತು ಸೂಕ್ತ ಮಾಹಿತಿ ನೀಡುವಂತೆ (ದಾಖಲೆ ಸಮೇತ) ಸೂಚಿಸಲಾಗಿದೆ. ಅಲ್ಲದೆ ಜಯಮೇರಿ ನೀಡಿದ ದೂರಿನನ್ವಯ ಜಿಲ್ಲಾಧಿಕಾರಿಗಳನ್ನು ಸಹ ವಿಚಾರಣೆ ನಡೆಸುವಂತೆ ನೋಟಿಸ್ ನೀಡಿರುವುದು ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ.
ಈ ಪ್ರಕರಣದಲ್ಲಿ ಹಿಂದಿನ ಅಧಿಕಾರಿ ಗೀತಾ ಹುಡೇದ್ ಅವರು ಸುದೀರ್ಘ ವಿಚಾರಣೆ ನಡೆಸಿದ್ದರು. ಈ ವೇಳೆ ನಗರಸಭೆ ಯುಜಿಡಿ ಕಾಮಗಾರಿ ಹಸ್ತಾಂತರ ಮಾಡಿಕೊಂಡ ಕುರಿತ ಅನೇಕ ಕಡತಗಳು ಮಾಯವಾಗಿದ್ದವು. ನಗರಸಭೆಯಲ್ಲಿ ಕಡತ ಮಾಯವಾದ ಕುರಿತ ವರದಿಯನ್ನು ಗೀತಾ ಹುಡೇದ್ ಅವರು ಸಲ್ಲಿಸಿದ್ದರು.