ಕನ್ನಡಪ್ರಭ ವಾರ್ತೆ ಕುಂದಾಪುರಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ಶುಭ ಮಹೂರ್ತದಲ್ಲಿ ಕಂಬದ ಗಣಪತಿ ದೇವರಿಗೆ ತಂತ್ರಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ನಿತ್ಯಾನಂದ ಅಡಿಗ ಪೂಜೆ ಸಲ್ಲಿಸುವ ಮೂಲಕ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ಶ್ರೀ ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗಣಪತಿ ಪ್ರಾರ್ಥನೆ, ನಾಂದಿ, ಪುಣ್ಯಾಹ ಅಂಕುರಾಧಿವಾಸ, ಸಿಂಹಯಾಗ, ವೃಷಭ ಲಗ್ನದಲ್ಲಿ ಧ್ವಜಾರೋಹಣಾ, ಯಾಗ ಶಾಲಾ ಪ್ರವೇಶ, ರಜ್ಜು ಬಂಧನ, ಮಹೂರ್ತಬಲಿ, ಭೇರಿತಾಡನ, ಕೌತುಕ ಬಂಧನ ಹಾಗೂ ಸಂಜೆ ನಗರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಮಹಾಲಿಂಗ ನಾಯ್ಕ್, ಸುರೇಂದ್ರ ಶೆಟ್ಟಿ ಸಹನಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು ಮುಂತಾದವರಿದ್ದರು.22ರಂದು ಮನ್ಮಹಾರಥೋತ್ಸವ
ರಾಜ್ಯದ ಪ್ರಮುಖ ರಥೋತ್ಸವಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಮಾ.15 ರಿಂದ ಮಾ.24 ರವರೆಗೆ ನಡೆಯಲಿದೆ. ಮಾ.16 ರಂದು ಮಯೂರಾರೋಹಣೋತ್ಸವ, ಮಾ.17 ರಂದು ಡೋಲಾರೋಹಣೋತ್ಸವ, ಮಾ.18 ರಂದು ಪುಷ್ಪ ಮಂಟಪಾರೋಹಣೋತ್ಸವ, ಮಾ.19 ರಂದು ವೃಷಭಾರೋಹಣೋತ್ಸವ, ಮಾ.20 ರಂದು ಗಜಾರೋಹಣೋತ್ಸವ, ಮಾ.21 ರಂದು ಸಿಂಹಾರೋಹಣೋತ್ಸವ, ಮಾ.22 ರ ಶನಿವಾರದಂದು ಬೆಳಿಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 5ಕ್ಕೆ ರಥಾವರೋಹಣ (ಶ್ರೀ ಮನ್ಮಹಾರಥೋತ್ಸವ ) ನಡೆಯಲಿದೆ. ಮಾ.23ರಂದು ಓಕುಳು, ಅವಭ್ರತ ಸ್ನಾನ, ಮಾ.24 ರಂದು ಅಶ್ವಾರೋಹಣೋತ್ಸವ ಹಾಗೂ ಅಂಕರು ಪ್ರಸಾದ ವಿತರಣೆ ನಡೆಯಲಿದೆ.ಉತ್ಸವ ನಡೆಯುವ ಪ್ರತಿ ದಿನಗಳಲ್ಲಿಯೂ ನಡೆಯುವ ಧಾರ್ಮಿಕ ವಿಧಿಗಳ ಆಚರಣೆಯ ಅಂಗವಾಗಿ ಊರಿನ ಪ್ರಮುಖ ರಸ್ತೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಉತ್ಸವ ನಡೆಸಲಾಗುತ್ತದೆ. ಮಾ.22 ರಂದು ನಡೆಯುವ ಮನ್ಮಹಾರಥೋತ್ಸವ ಜೋಡಿ ಉತ್ಸವ ಮೂರ್ತಿಯನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸುವ ಪರಂಪರೆ ಇಲ್ಲಿದೆ. ಜಾತ್ರಾ ಅವಧಿಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ದಿನ ಸಂಜೆ ಸ್ವರ್ಣಮುಖಿ ರಂಗಮಂದಿರದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಕಲಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.